ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಂದು ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರದ ಸಾಲುಸಾಲು ವೈಫಲ್ಯಗಳನ್ನು ಪುಸ್ತಕದ ರೂಪದಲ್ಲಿ ಆಮ್ ಆದ್ಮಿ ಪಾರ್ಟಿ ಬಿಡುಗಡೆ ಮಾಡಿತು.
ಬೆಂಗಳೂರಿನ ಪ್ರೆಸ್‌ಕ್ಲಬ್‌ನಲ್ಲಿ ಎಎಪಿಯಿಂದ ಬಿಜೆಪಿಯ ಬೊಗಳೆ ಆಡಳಿತ ಪುಸ್ತಕ ಬಿಡುಗಡೆ ಮಾಡಲಾಯಿತು. ಬಳಿಕ ಮಾತನಾಡಿದ ಎಎಪಿ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅವರು ಜನರ ಆಶೋತ್ತರಗಳನ್ನು ಈಡೇರಿಸುವುದರಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸರ್ಕಾರದ 40% ಕಮಿಷನ್ ದಂಧೆಯಿಂದಾಗಿ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ವೈಫಲ್ಯಗಳನ್ನು ಮರೆಮಾಚಲು ಹಾಗೂ ರಾಜಕೀಯ ಲಾಭ ಪಡೆಯಲು ಬಿಜೆಪಿಯು ಕೋಮುದ್ವೇಷ ಹರಡುತ್ತಿದೆ. ಸರ್ಕಾರದ ದುರಾಡಳಿತದಿಂದಾಗಿ ಜನಸಾಮಾನ್ಯರ ನೆಮ್ಮದಿ ಹಾಳಾಗಿದೆ ಎಂದು ಹೇಳಿದರು.
ಪಠ್ಯಪುಸ್ತಕ ಪರಿಷ್ಕರಣೆ ವಿವಾದ, ಕೋಮುದ್ವೇಷ, ಪಿಎಸ್‌ಐ ಹಗರಣ, ಗುತ್ತಿಗೆ ಕಾಮಗಾರಿಗಳಲ್ಲಿ ವ್ಯಾಪಕ ಭ್ರಷ್ಟಾಚಾರ ಮುಂತಾದವುಗಳೇ ಸರ್ಕಾರದ ಸಾಧನೆಗಳು. ಅಧಿಕಾರಕ್ಕೆ ಬಂದರೆ ಮೊದಲ ಸಚಿವ ಸಂಪುಟ ಸಭೆಯಲ್ಲೇ ಲೋಕಾಯುಕ್ತ ಸಂಸ್ಥೆಯನ್ನು ಮರಳಿ ಬಲಪಡಿಸುವುದಕ್ಕೆ ಅನುಮೋದನೆ ನೀಡುವುದಾಗಿ ಬಿಜೆಪಿಯು 2018ರ ಚುನಾವಣೆಯ ಪ್ರಣಾಳಿಕೆಯಲ್ಲಿ ಸ್ಪಷ್ಟವಾಗಿ ಹೇಳಿತ್ತು.
ಆದರೆ ಬಿಜೆಪಿಗೆ ಅಧಿಕಾರ ಸಿಕ್ಕಿ ಮೂರು ವರ್ಷಗಳಾದರೂ ಇನ್ನೂ ಲೋಕಾಯುಕ್ತ ಸಂಸ್ಥೆಯು ಹಲ್ಲು ಕಿತ್ತ ಹಾವಿನ ಸ್ಥಿತಿಯಲ್ಲಿದೆ. ಲೋಕಾಯುಕ್ತ ಸಂಸ್ಥೆಯನ್ನು ಬಲಪಡಿಸಲು ಸಿದ್ಧವೆಂದು ಬಿಜೆಪಿ ನಾಯಕರು ಕಳೆದ ಮೂರು ವರ್ಷಗಳಿಂದ ಬೊಗಳೆ ಬಿಡುತ್ತಿದ್ದಾರೆಯೇ ಹೊರತು ಈ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಚಂದ್ರು ಟೀಕಿಸಿದರು.
ರಾಜಧಾನಿ ತೀವ್ರ ನಿರ್ಲಕ್ಷ್ಯ: ಎಎಪಿಯ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಮಾತನಾಡಿ, ಬಿಜೆಪಿ ಆಡಳಿತದಲ್ಲಿ ರಾಜ್ಯ ರಾಜಧಾನಿ ಬೆಂಗಳೂರು ತೀವ್ರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ರಸ್ತೆ ಗುಂಡಿಗಳು, ಕಸದ ರಾಶಿ, ಮನೆಗಳಿಗೆ ನೀರು ನುಗ್ಗುವುದು, ರಸ್ತೆಗಳು ನದಿಗಳಂತಾಗುವುದು ಸಾಮಾನ್ಯವಾಗಿದೆ.
ರಾಜಧಾನಿ ಬೆಂಗಳೂರಿನಲ್ಲೇ ಹಲವು ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಪೂರೈಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಸರ್ಕಾರಿ ಶಾಲೆಗಳು, ಸರ್ಕಾರಿ ಆರೋಗ್ಯ ಕೇಂದ್ರಗಳು ಮೂಲ ಸೌಕರ್ಯಗಳಿಲ್ಲದೇ ಶೋಚನೀಯ ಸ್ಥಿತಿ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಆಮ್ಆದ್ಮಿ ಪಾರ್ಟಿಯ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಹಾಗೂ ಮತ್ತಿತರ ನಾಯಕರು ಭಾಗಿಯಾಗಿದ್ದರು.
ಇದನ್ನೂ ಓದಿ: ನಾಳೆ ಅಮಿತ್ ಶಾ ಜೊತೆ ಸಿಎಂ ಲಂಚ್ ಮೀಟ್: ಕೇಸರಿ ಪಾಳಯದಲ್ಲಿ ಗರಿಗೆದರಿದ ಕುತೂಹಲ