ಬೆಂಗಳೂರು : ಕೇಂದ್ರ ಸರ್ಕಾರದಡಿ ಬರುವ ಐಬಿಪಿಎಸ್ (ಇನ್ಸ್ಟಿಟ್ಯೂಟ್ ಫಾರ್ ಬ್ಯಾಂಕಿಂಗ್ ಪರ್ಸನಲ್ ಸೆಲೆಕ್ಷನ್) ಪರೀಕ್ಷೆಯನ್ನು ಕೇವಲ ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ನಡೆಸುತ್ತಿರುವುದೇಕೆ? ಕನ್ನಡ ಹಾಗೂ ಇತರೆ ಭಾಷಿಗರು ಅವಕಾಶ ವಂಚಿತರಾಗುವುದಿಲ್ಲವೇ ಎಂದು ಆಮ್ ಆದ್ಮಿ ಪಕ್ಷದ ಉಪಾಧ್ಯಕ್ಷ ಡಾ.ರಮೇಶ್ ಬೆಲ್ಲಂಕೊಂಡ ಪ್ರಶ್ನಿಸಿದ್ದಾರೆ.
ರಾಷ್ಟ್ರೀಯ ಪರೀಕ್ಷೆಯಲ್ಲಿ ಹಿಂದಿಯೇತರ ಭಾಷೆಗಳ ಕಡೆಗಣನೆಗೆ ಸಂಬಂಧಿಸಿದಂತೆ ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶದಲ್ಲಿರುವ ಹಿಂದಿ ಮಾತೃಭಾಷಿಗರು ಹಿಂದಿಯಲ್ಲೇ ಪರೀಕ್ಷೆ ತೆಗೆದುಕೊಳ್ಳಬಹುದಾದರೆ, ಕನ್ನಡಿಗರು ಹಾಗೂ ದೇಶದ ಇನ್ನಿತರ ಮಾತೃಭಾಷಿಗರಿಗೂ ಅವರದೇ ಭಾಷೆಯ ಆಯ್ಕೆ ಏಕಿಲ್ಲ ಎಂದು ಕೇಳಿದರು. ತಮ್ಮ ಮಾತೃಭಾಷೆಯನ್ನು ಬಿಟ್ಟು ಇಂಗ್ಲಿಷ್ ಭಾಷೆಯಲ್ಲಿ ಪರೀಕ್ಷೆ ತೆಗೆದುಕೊಳ್ಳುವ ಅನಿವಾರ್ಯ ವಾತಾವರಣ ಏಕಿದೆ ಎಂದು ಕಿಡಿಕಾರಿದರು.
ಇದು ಹಿಂದಿ ಹೇರಿಕೆ ಹಾಗೂ ಹಿಂದಿಯೇತರರನ್ನು 2ನೇ ದರ್ಜೆ ಭಾರತೀಯರನ್ನಾಗಿ ಪರಿಗಣಿಸುವ ಕುತಂತ್ರ. ಅಂದಾಜು ಏಳು ಕೋಟಿ ಕನ್ನಡಿಗರು ಕರ್ನಾಟಕದಲ್ಲಿ ಹಾಗೂ ಅಂದಾಜು 82 ಕೋಟಿ ಹಿಂದಿಯೇತರರು ಭಾರತದಲ್ಲಿದ್ದಾರೆ. ಈ ಕಾರ್ಯವು ಇವರನ್ನು ಗುಲಾಮಗಿರಿಗೆ ತಳ್ಳುವ ಪ್ರಯತ್ನವಲ್ಲವೇ? ಎಂದು ಹೇಳಿದರು.
ಸಂಸ್ಕೃತ ವಿಷಯದ ಬಗ್ಗೆ ಮಾತನಾಡುತ್ತಾ, ಸಂಸ್ಕೃತಕ್ಕೂ ಬ್ಯಾಂಕ್ ಸೇವೆಗಳಿಗೂ ಏನು ಸಂಬಂಧ?. ಬ್ಯಾಂಕುಗಳಲ್ಲಿ ಕನ್ನಡಕ್ಕೆ ಅವಕಾಶ ಇಲ್ಲ, ಸಂಸ್ಕೃತಕ್ಕೆ ಇದೆ ಎನ್ನುವುದಾದರೆ, ಇದು ವಿಪರ್ಯಾಸವಲ್ಲವೇ? ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕರ್ನಾಟಕದಲ್ಲಿ ಹಾಗೂ ಬೇರೆ ಎಲ್ಲೆಡೆ ಕೂಡ ಜನರಲ್ಲಿ ಮನವಿ ಮಾಡುತ್ತೇನೆ. ಬ್ಯಾಂಕುಗಳಲ್ಲಿ ಈ ಭಾಷಾ ನೀತಿಯ ಅನ್ಯಾಯವನ್ನು ತಡೆಯಲು ಮತ್ತು ಈಗಾಗಲೇ ಆಗಿರುವ ಅನ್ಯಾಯಕ್ಕೆ ಪರಿಹಾರ ಒದಗಿಸಲು ನಾವೆಲ್ಲರೂ ಕೈ ಜೋಡಿಸೋಣ ಎಂದು ಕರೆ ನೀಡಿದರು.
ಕರ್ನಾಟಕದಲ್ಲಿ ಪ್ರಧಾನ ಮಂತ್ರಿ ಮೋದಿ ಮತ್ತು ಬಿಜೆಪಿಯ ಎಲ್ಲಾ ಬೆಂಬಲಿಗರಿಗೆ ಸಂದೇಶವನ್ನು ನೀಡುತ್ತೇನೆ. ದಯವಿಟ್ಟು ಎಚ್ಚರಗೊಳ್ಳಿ. ಅವರು ನಿಮಗೆ ಏನು ಮಾಡುತ್ತಿದ್ದಾರೆಂದು ಅರ್ಥ ಮಾಡಿಕೊಳ್ಳಿ. ನಿಮ್ಮದೇ ಗುಲಾಮಗಿರಿಗೆ ನೀವು ವೋಟು ಹಾಕಬೇಡಿ. ನಮ್ಮೊಡನೆ ಕೈ ಜೋಡಿಸಿ. ನಾವೆಲ್ಲರೂ ಒಟ್ಟಾಗಿ ಬದಲಾವಣೆ ತರೋಣ ಎಂದು ರಮೇಶ್ ಬೆಳ್ಳಂಕೊಂಡ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಂಸದ ಡಾ. ವೆಂಕಟೇಶ್, ಬೆಂಗಳೂರು ಮಾಧ್ಯಮ ಸಂಚಾಲಕ ಅನಿಲ್ ನಾಚಪ್ಪ, ಅಶ್ವಿನಿ ಸೇರಿದಂತೆ ಮತ್ತಿತರರು ಇದ್ದರು.
ಇದನ್ನೂ ಓದಿ : SC-ST ವಿದ್ಯಾರ್ಥಿಗಳ ಲ್ಯಾಪ್ಟಾಪ್ಗೆ ₹230 ಕೋಟಿ ಒದಗಿಸಲು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಸೂಚನೆ