ಬೆಂಗಳೂರು: ಕೊರೊನಾ ನಂತರ ಚೀನಾ ಬಿಟ್ಟು ಭಾರತದ ಕಡೆ ಮುಖ ಮಾಡುತ್ತಿದ್ದ ವಿಶ್ವದ ಪ್ರತಿಷ್ಠಿತ ಕಂಪನಿಗಳು ವಿಸ್ಟ್ರಾನ್ ಹಾಗೂ ಟೊಯೋಟಾ ಕಂಪನಿಗಳ ಬಿಕ್ಕಟ್ಟು ವಿಚಾರದಲ್ಲಿ ಕರ್ನಾಟಕ ಸರ್ಕಾರ ನಡೆದುಕೊಂಡ ಬೇಜವಾಬ್ದಾರಿ ನೀತಿಯಿಂದ ಕಂಪನಿಗಳು ಭಾರತಕ್ಕೆ ಬರಲು ಹಿಂದೇಟು ಹಾಕುತ್ತಿವೆ. ಇದರಿಂದ ಕರ್ನಾಟಕದ ಮಾನ ರಾಷ್ಟ್ರಮಟ್ಟದಲ್ಲಿ ಹರಾಜಾಗಿದೆ ಎಂದು ಅಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಅಧ್ಯಕ್ಷ ಮೋಹನ್ ದಾಸರಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ನಂತರ ಆಗಬಹುದಾಗಿದ್ದ ಔದ್ಯೋಗಿಕ ಕ್ರಾಂತಿಗೆ ಕರ್ನಾಟಕದಲ್ಲಿ ನಡೆದ ಘಟನೆಗಳಿಂದ ಲಕ್ಷಾಂತರ ಉದ್ಯೋಗ ನಷ್ಟವಾಗಿದೆ. 60 ಲಕ್ಷ ಉದ್ಯೋಗ ಸೃಷ್ಟಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿಗಳೇ ಮೊದಲು ಟೊಯೋಟಾ ಹಾಗೂ ವಿಸ್ಟ್ರಾನ್ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ 20 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳ ಭವಿಷ್ಯ ಕಾಪಾಡಿ ಎಂದರು.
ಅಸಮರ್ಥ ಕೈಗಾರಿಕಾ, ಕಾರ್ಮಿಕ ಸಚಿವರಿಂದ ರಾಜ್ಯದಲ್ಲಿ ಔದ್ಯೋಗಿಕ ಕ್ರಾಂತಿ ನಿರೀಕ್ಷಿಸುವುದು ಅಸಾಧ್ಯ. ವಿಸ್ಟ್ರಾನ್ ಘಟನೆಯಿಂದ ಚೀನಾ ಜನತೆ ನಮ್ಮ ದೇಶವನ್ನು ಆಡಿಕೊಳ್ಳುವಂತಾಗಿದೆ. ಈ ಕಳಂಕಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ. ಅಲ್ಲದೆ ಸರ್ಕಾರದಿಂದ ಹೂಡಿಕೆದಾರರಿಗೆ ಸರಿಯಾದ ಮಾರ್ಗಸೂಚಿಯೇ ಇಲ್ಲದಂತಾಗಿದೆ. ಎಬಿಸಿ ಸ್ಕೀಮ್ (ಅಫಿಡವಿಟ್ ಬೇಸ್ಡ್ ಕ್ಲಿಯರೆನ್ಸ್) ಎನ್ನುವ ಕಣ್ಣೊರೆಸುವ ಯೋಜನೆ ತಂದು ಉದ್ಯೋಗದಾತರಿಗೂ ವಂಚಿಸಲಾಗುತ್ತಿದೆ ಎಂದರು.
ಅಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಕೆ.ಬಿ.ನಾಗಣ್ಣ ಮಾತನಾಡಿ, ಡಿಸಿಎಂ ಅಶ್ವತ್ಥ ನಾರಾಯಣ ಅವರು ಕಾರ್ಮಿಕರ ಬಿಕ್ಕಟ್ಟುಗಳಿಗೂ ಹಾಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಇದನ್ನು ಕಾರ್ಮಿಕ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳಲಿ ಎಂದು ಹೇಳುವಷ್ಟು ಮತಿ ಹೀನರಾಗಿದ್ದಾರೆ. ಇಂತಹ ಮಂತ್ರಿಯನ್ನು ಪಡೆದ ನಾವೇ ಧನ್ಯರು ಎಂದು ವ್ಯಂಗ್ಯವಾಡಿದರು.