ಬೆಂಗಳೂರು: ಬಿಜೆಪಿ ಶಾಸಕರು ನಿರಂತರವಾಗಿ ಕೆಲಸ ಮಾಡುತ್ತಿರಬೇಕೆಂದರೆ ಪ್ರಧಾನಿ ನರೇಂದ್ರ ಮೋದಿಯವರು ವಾರಕ್ಕೊಮ್ಮೆ ಬೆಂಗಳೂರು ನಗರಕ್ಕೆ ಬರಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟ್ವೀಟ್ ಮೂಲಕ ವ್ಯಂಗ್ಯವಾಡಿದ್ದಾರೆ.
ನವೆಂಬರ್ 11 ರಂದು ಮೋದಿ ಬೆಂಗಳೂರಿಗೆ ಬರುತ್ತಿರುವ ಹಿನ್ನೆಲೆ ರಸ್ತೆಗುಂಡಿಗಳನ್ನು ಮುಚ್ಚುತ್ತಿರುವುದರ ಚಿತ್ರವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಅವರು, ನರೇಂದ್ರ ಮೋದಿಯವರು ಬೆಂಗಳೂರಿಗೆ ಬರುತ್ತಾರೆಂದರೆ ಖುಷಿಯಾಗುತ್ತದೆ. ಸದಾ ಗೊರಕೆ ಹೊಡೆಯುವ ಬಿಜೆಪಿ ಶಾಸಕರು ರಸ್ತೆ ಗುಂಡಿ ಮುಚ್ಚಿಸುತ್ತಾರೆ. ಸುಣ್ಣ ಬಣ್ಣ ಹೊಡೆಯುತ್ತಾರೆ. ಒಂದು ಮನವಿ ಮೋದಿಯವರೇ, ನೀವು ವಾರಕ್ಕೊಮ್ಮೆ ಬರುತ್ತಿರಿ. ನಿಮ್ಮ ಶಾಸಕರು ಆಗಲಾದರೂ ಕೆಲಸ ಮಾಡುತ್ತಾರೋ ನೋಡೋಣ ಎಂದು ವ್ಯಂಗ್ಯವಾಡಿದ್ದಾರೆ.
'ನಮ್ಮಲ್ಲಿಗೂ ಬನ್ನಿ ಮೋದಿ' ಅಭಿಯಾನ.. ಮೋದಿ ಸಂಚರಿಸುವ ರಸ್ತೆಯಲ್ಲಿ ಮಾತ್ರ ಗುಂಡಿಗಳನ್ನು ಬಿಬಿಎಂಪಿ ಮುಚ್ಚುತ್ತಿರುವ ಹಿನ್ನೆಲೆ, ಆಮ್ ಆದ್ಮಿ ಪಕ್ಷ 'ನಮ್ಮಲ್ಲಿಗೂ ಬನ್ನಿ ಮೋದಿ' ಅಭಿಯಾನವನ್ನು ಹಮ್ಮಿಕೊಂಡಿದೆ. ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ, "ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಯಮಸ್ವರೂಪಿ ಗುಂಡಿಗಳಿವೆ. ಜನಸಾಮಾನ್ಯರ ಬಗ್ಗೆ ಕಿಂಚಿತ್ತೂ ಕಾಳಜಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಇಲ್ಲ. ಪ್ರಧಾನಿ ಮೋದಿ ಬರುತ್ತಾರೆಂದರೆ ಮಾತ್ರ ಗುಂಡಿಗಳನ್ನು ಮುಚ್ಚುತ್ತಾರೆ. ಮೋದಿಯವರು ಎಲ್ಲಾ ರಸ್ತೆಗಳಲ್ಲೂ ಸಂಚರಿಸಬೇಕೆಂದು ಆಗ್ರಹಿಸಿ ನಮ್ಮ ಪಕ್ಷ ವಿನೂತನ ಚಳವಳಿ ಆರಂಭಿಸಿದೆ" ಎಂದರು.
ಇದನ್ನೂ ಓದಿ:ನಿರ್ದಿಷ್ಟ ಕ್ಷೇತ್ರ ಘೋಷಿಸದ ಸಿದ್ದರಾಮಯ್ಯ ಅಂಜುಬುರುಕ, ರಾಜಕೀಯ ಅಲೆಮಾರಿ: ಸಂಸದ ಶ್ರೀನಿವಾಸ್ ಪ್ರಸಾದ್