ಯಲಹಂಕ(ಬೆಂಗಳೂರು): ಆರು ವರ್ಷಗಳ ಹಿಂದೆ ಕಳೆದ್ಹೋಗಿದ್ದ ಮಾತು ಬಾರದ ಮಗ, ಕೊನೆಗೂ ತಾಯಿ ಮಡಿಲು ಸೇರಿದ್ದಾನೆ. ತಾಯಿ ಮಗ ಒಂದಾಗಲು ಆಧಾರ್ ಕಾರ್ಡ್ ನೆರವಿಗೆ ಬಂದಿದೆ. ಮಗ ಬಂದೇ ಬರುತ್ತಾನೆಂಬ ನಂಬಿಕೆಯಲ್ಲಿದ್ದ ತಾಯಿ ತನ್ನ ಮಗನನ್ನು ತಬ್ಬಿ ಮುದ್ದಾಡಿದ್ದಾಳೆ.
ತಾಯಿಯಿಂದ 20 ರೂ. ತೆಗೆದುಕೊಂಡು ನಾಪತ್ತೆಯಾದ ಮಗ : ಯಲಹಂಕ ತಾಲೂಕಿನ ಸಿಂಗನಾಯಕನಹಳ್ಳಿ ನಿವಾಸಿ ಪಾವರ್ತಮ್ಮ ಯಲಹಂಕದ ರೈತರ ಸಂತೆಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ.
2016ರಲ್ಲಿ ತರಕಾರಿ ವ್ಯಾಪಾರಕ್ಕೆ ಮಗ ಭರತ್‌ನನ್ನ ಕರೆದುಕೊಂಡು ಹೋದ ಸಮಯದಲ್ಲಿ, ತಿಂಡಿ ತೆಗೆದುಕೊಳ್ಳಲು ತಾಯಿ ಬಳಿ ಹಣ ಕೇಳಿದ್ದಾಗ, ವ್ಯಾಪಾರ ಮಾಡುವಲ್ಲಿ ತಲ್ಲೀನರಾಗಿದ್ದ ಪಾರ್ವತಮ್ಮ 20 ರೂ. ಕೊಟ್ಟಿದ್ದಾರೆ.
ಅಲ್ಲಿಂದ ತಿಂಡಿ ತರಲು ಹೋದ ಮಗ ವಾಪಸ್ ಬಂದಿಲ್ಲ. ಮಗನಿಗಾಗಿ ಸುತ್ತಮುತ್ತ ಹುಡುಕಾಡಿದ್ದಾರೆ. ಆದರೆ, ಮಗ ಪತ್ತೆಯಾಗಿಲ್ಲ. ಈ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ ಪಾರ್ವತಮ್ಮ, ಮಗ ಇಂದಲ್ಲ,ನಾಳೆ ಬಂದೇ ಬುತ್ತಾನೆ ಎಂದು ಕಾಯುತ್ತಲೇ ಇದ್ದರು.
ತಾಯಿ-ಮಗ ಒಂದಾಗಲು ಆಧಾರ್ : ತಿಂಡಿ ತರಲು ಹೋದ ಭರತ್ ಯಲಹಂಕ ರೈಲ್ವೆ ಸ್ಟೇಷನ್ನಲ್ಲಿ ರೈಲು ಹತ್ತಿ ಮಹಾರಾಷ್ಟ್ರದ ನಾಗ್ಪುರ ತಲುಪಿದ. 10 ತಿಂಗಳು ನಾಗ್ಪುರ ರೈಲ್ವೆ ಸ್ಟೇಷನ್ ಬಳಿ ಸುತ್ತಾಡುತ್ತಿದ್ದ ಭರತ್‌ನನ್ನ ರೈಲ್ವೆ ಭಧ್ರತಾ ಪಡೆ ಅಧಿಕಾರಿಗಳು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದಾರೆ. ಪುನರ್ವಸತಿ ಕೇಂದ್ರದ ಸಿಬ್ಬಂದಿ ಭರತ್‌ನ ಪೋಷಕರ ಪತ್ತೆಗಾಗಿ ಪ್ರಯತ್ನ ನಡೆಸಿದ್ದಾರೆ. ಆದರೆ, ಮೂಗನಾಗಿದ್ದ ಕಾರಣ ಆತನಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ.
2020ರ ಜನವರಿ ತಿಂಗಳಲ್ಲಿ ಆತನಿಗೆ ಆಧಾರ್ ಕಾರ್ಡ್ ಮಾಡಿಸಲು ಮಹೇಶ್ ಎಂಬುವರು ಆಧಾರ್ ಸೇವಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ, ಭರತ್‌ನ ಆಧಾರ್ ಕಾರ್ಡ್ ತಿರಸ್ಕೃತವಾಗಿರುವ ಬಗ್ಗೆ ಆಧಾರ್ ಸೇವಾ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈಗಾಗಲೇ ಬೆಂಗಳೂರಿನಲ್ಲಿ ಬಿ.ಭರತ್ ಕುಮಾರ್ ಹೆಸರಿನಲ್ಲಿ ಆತನ ಕಾರ್ಡ್ ಚಾಲ್ತಿಯಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾಹಿತಿ ತಿಳಿದ ಕೂಡಲೇ ಮಹೇಶ್ ಭರತ್ ಪೋಷಕರ ವಿಳಾಸ ಪತ್ತೆಗೆ ನೆರವಾಗುವಂತೆ ವಿನಂತಿಸಿದ್ದರು.
ಮಹೇಶ್ ಮನವಿಗೆ ಸ್ಪಂದಿಸಿದ ಆಧಾರ್ ಕೇಂದ್ರದ ಅಧಿಕಾರಿಗಳು, ಬಿ.ಭರತ್ ಕುಮಾರ್ ಹೆಸರಿನಲ್ಲಿದ್ದ ಬೆರಳಚ್ಚು ಹೋಲಿಕೆ ಮಾಡಿದಾಗ ಎರಡೂ ಹೋಲಿಕೆಯಾಗಿತ್ತು. ಆಧಾರ್ ಮೂಲಕ ಭರತ್‌ನ ತಾಯಿ ಪಾರ್ವತಮ್ಮ ಅವರ ಮೊಬೈಲ್ ನಂಬರ್ ಸಿಕ್ಕಿತ್ತು. ಪುನರ್ವಸತಿ ಕೇಂದ್ರದವರು ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದರು.
ನಂತರ ಯಲಹಂಕ ಪೊಲೀಸರನ್ನು ಸಂಪರ್ಕಿಸಿದರು. ಯಲಹಂಕ ಪೊಲೀಸರು ಭರತ್ ಕಾಣೆಯಾಗಿರುವ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು. ಕೊನೆಗೆ ಭರತ್ ತಾಯಿ ಪಾರ್ವತಮ್ಮ ಅವರನ್ನ ಪತ್ತೆ ಮಾಡಿದ ಯಲಹಂಕ ಠಾಣೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ್ ಪೊಲೀಸರ ಜತೆಯಲ್ಲಿ ಪಾರ್ವತಮ್ಮ ಅವರನ್ನ ನಾಗ್ಪುರಕ್ಕೆ ಕಳುಹಿಸುವ ಮೂಲಕ ತಾಯಿ-ಮಗನನ್ನು ಒಂದು ಮಾಡಿದ್ದಾರೆ.
ವಿಡಿಯೋ ಕಾಲ್ನಲ್ಲಿ ತಾಯಿ ಕಂಡು ಕಣ್ಣೀರು ಹಾಕಿದ ಮಗ : ಭರತ್ ತಾಯಿ ಪತ್ತೆಯಾದ ನಂತರ ಯಲಹಂಕ ಪೊಲೀಸರು ವಿಡಿಯೋ ಕಾಲ್ ಮಾಡಿ ಭರತ್ ಜೊತೆ ಮಾತನಾಡಿಸಿದ್ದಾರೆ. ವಿಡಿಯೋ ಕಾಲ್ನಲ್ಲಿ ತನ್ನ ತಾಯಿಯನ್ನ ಗುರುತಿಸಿದ ಭರತ್ 6 ವರ್ಷಗಳ ನಂತರ ತನ್ನ ಅಮ್ಮನನ್ನು ನೋಡಿ ಕಣ್ಣೀರು ಹಾಕಿದ. ಮಾ.7ರಂದು ಕುಟುಂಬದ ಜೊತೆ ನಾಗ್ಪುರಕ್ಕೆ ತೆರಳಿದ ಪಾರ್ವತಮ್ಮ, ಮಗನನ್ನು ಕಂಡು ಭಾವುಕರಾಗಿ ತಬ್ಬಿ ಮುದ್ದಾಡಿದರು. ಆರು ವರ್ಷಗಳ ನಂತರ ಸಿಂಗಾನಾಯಕನಹಳ್ಳಿಯ ಮನೆಗೆ ಮಗನನ್ನು ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿದ್ದುಕೊಂಡು ನಕಲಿ ದಾಖಲೆ ಸೃಷ್ಟಿಸಿ ರೋಹಿಂಗ್ಯಾಗಳನ್ನು ಭಾರತದೊಳಗೆ ಸೇರಿಸುತ್ತಿದ್ದ ವ್ಯಕ್ತಿ ಸೇರಿ 6 ಮಂದಿ ಬಂಧನ