ಬೆಂಗಳೂರು: ಅಪಾರ್ಟ್‍ಮೆಂಟ್‍ನಲ್ಲಿ ಮನೆ ಕೆಲಸಕ್ಕೆಂದು ಸೇರಿಕೊಂಡು ಅದೇ ಮನೆಗಳಲ್ಲಿ ಚಿನ್ನಾಭರಣ ಕಳವು ಮಾಡುತ್ತಿದ್ದ ಮಹಿಳೆಯೊಬ್ಬಳನ್ನು ನಗರದ ಆರ್.ಎಂ.ಸಿ. ಯಾರ್ಡ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕೃಷ್ಣಂ ಪಲ್ಲಿ ನಿವಾಸಿ ಪುಷ್ಪಾ ಬಂಧಿತ ಮಹಿಳೆ. ಈಕೆಯಿಂದ 18 ಲಕ್ಷ ರೂ. ಮೌಲ್ಯದ 378 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಯು, ಆಂಧ್ರಪ್ರದೇಶದಿಂದ ನಗರಕ್ಕೆ ಬಂದು ಅಪಾರ್ಟ್‍ಮೆಂಟ್‍ಗಳಲ್ಲಿ ಮನೆ ಕೆಲಸ ಮಾಡುತ್ತಿದ್ದಳು. ಮನೆ ಮಾಲೀಕರು ಚಿನ್ನಾಭರಣ ಇಡುತ್ತಿದ್ದನ್ನು ಗಮನಿಸುತ್ತಿದ್ದಳು. ಮಾಲೀಕರು ಮನೆಯಿಂದ ಹೊರಹೋದ ಸಂದರ್ಭದಲ್ಲಿ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣಗಳನ್ನು ಕಳವು ಮಾಡುತ್ತಿದ್ದಳು.
ನಗರದ ಯಶವಂತಪುರದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್‍ಮೆಂಟ್‍ನ ಮನೆಯೊಂದರಲ್ಲಿ ಜೂನ್ 1ರಿಂದ ಮನೆ ಕೆಲಸಕ್ಕೆ ಸೇರಿಕೊಂಡಿದ್ದ ಈಕೆ, ಚಿನ್ನಾಭರಣಗಳನ್ನು ಕಳವು ಮಾಡಿದ್ದಳು. ಇದೇ ವೇಳೆ, ಮನೆ ಮಾಲೀಕರು ತಮ್ಮ ಚಿನ್ನಾಭರಣಗಳನ್ನು ಬ್ಯಾಂಕ್ ಲಾಕರ್ನಲ್ಲಿಡಲು ನೋಡಿದಾಗ ಕಳವಾಗಿರುವುದು ತಿಳಿದಿದೆ.
ಕೂಡಲೇ ಈ ಸಂಬಂಧ ಪಟ್ಟ RMC ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಕೈಗೊಂಡು ಮನೆ ಕೆಲಸದಾಕೆ ಮೇಲೆ ಅನುಮಾನಗೊಂಡು ವಿಚಾರಣೆ ನಡೆಸಿದಾಗ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಮನೆ ಕೆಲಸದಿಂದ ದೊರೆಯುವ ಕೂಲಿ, ಮನೆ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಹೀಗಾಗಿ, ಕಳವು ಮಾಡಿದ್ದೆ ಎಂದು ಒಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ಬಂಧಿಸಿ, ಆಕೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.