ಬೆಂಗಳೂರು: ಅಶ್ಲೀಲ ವಿಡಿಯೋದಲ್ಲಿರುವಂತೆ ಲೈಂಗಿಕ ಕ್ರಿಯೆಗೆ ಸಹಕರಿಸದಿದ್ದರೆ ಕೊಂದು ಬಿಡುತ್ತೇನೆ ಎಂದು ಪೀಡಿಸುತ್ತಾ ಪದೇಪದೆ ತೊಂದರೆ ನೀಡುತ್ತಿದ ಗಂಡನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ನಗರದ ನಾಗರಬಾವಿ 2ನೇ ಹಂತದ 36 ವರ್ಷದ ಮಹಿಳೆಯೊಬ್ಬರು ಕೊಟ್ಟ ದೂರಿನ ಆಧಾರದ ಉದ್ಯಮಿ ರವಿ (47) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮಹಿಳೆಯು ತನ್ನ ಗಂಡನ ಕರಾಳ ಮುಖವನ್ನು ಬಿಚ್ಚಿಟ್ಟು ತಾನು ಅನುಭವಿಸಿದ ನೋವನ್ನೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಏನಿದೆ?
2000ರಲ್ಲಿ ಉದ್ಯಮಿ ರವಿ ಜತೆ ಈ ಮಹಿಳೆ ಮದುವೆಯಾಗಿದ್ದರು. ಗಂಡ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇತ್ತೀಚೆಗೆ ರವಿ ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಆಡಲು ಪ್ರಾರಂಭಿಸಿದ್ದ ಎನ್ನಲಾಗಿದೆ. ವಿವಾಹದಲ್ಲಿ ಪತಿಗೆ ಪತ್ನಿ ಮನೆಯವರು ನೀಡಿದ್ದ ಚಿನ್ನಾಭರಣ ಹಾಗೂ ಪತ್ನಿ ಕೆಲಸ ಮಾಡಿ ಉಳಿತಾಯ ಮಾಡಿದ್ದ 5 ಲಕ್ಷ ರೂಪಾಯಿಯನ್ನು ಐಪಿಎಲ್ ಬೆಟ್ಟಿಂಗ್ ಹಾಗೂ ಇಸ್ಪೀಟ್ ಆಟಕ್ಕೆ ಬಳಸಿಕೊಂಡಿದ್ದನಂತೆ.
ಸಣ್ಣ ಪುಟ್ಟ ವಿಚಾರಕ್ಕೆ ಹೆಂಡತಿಯ ಮೇಲೆ ರೇಗುತ್ತಿದ್ದ ಈತ , ಹಲ್ಲೆ ನಡೆಸುತ್ತಿದ್ದ. ಕುಟುಂಬದ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಂಡಿರಲಿಲ್ಲ ಎಂದು ದೂರಿನಲ್ಲಿ ವಿವರಿಸಲಾಗಿದೆ. ಆರೋಪಿಯು ಅಶ್ಲೀಲ ವಿಡಿಯೋವನ್ನು ಆಗಾಗ ಪತ್ನಿಗೆ ತೋರಿಸಿ ಆ ವಿಡಿಯೋದಲ್ಲಿ ಇರುವಂತೆ ನನ್ನೊಂದಿಗೆ ಲೈಂಗಿಕ ಕ್ರಿಯೆಗೆ ಸಹಕರಿಸಬೇಕು ಎಂದು ಕಿರುಕುಳ ನೀಡುತ್ತಿದ್ದ. ಇದಕ್ಕೆ ಪತ್ನಿ ನಿರಾಕರಿಸಿದಾಗ ತವರು ಮನೆಯಿಂದ ವರದಕ್ಷಿಣೆ ತರುವಂತೆ ಬೆದರಿಸುತ್ತಿದ್ದ. ಯಲಹಂಕದಲ್ಲಿ ಪತ್ನಿಯ ಹೆಸರಿನಲ್ಲಿರುವ ನಿವೇಶನವನ್ನು ತನ್ನ ಹೆಸರಿಗೆ ಬರೆದುಕೊಡುವಂತೆ ಹಿಂಸೆ ಕೊಡುತ್ತಿದ್ದ. ತಾನು ಹೇಳುವ ದಾಖಲೆಗಳಿಗೆ ಸಹಿ ಹಾಕದಿದ್ದರೆ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ದೂರಿನಲ್ಲಿ ಹೇಳಲಾಗಿದೆ.