ಬೆಂಗಳೂರು: ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದ್ದಕ್ಕೆ ಅಸಮಾಧಾನಗೊಂಡ ಗಂಡನ ಮನೆಯವರು ನವವಿವಾಹಿತೆಗೆ ಕಿರುಕುಳ ನೀಡಿದ್ದು, ಇದರಿಂದ ಬೇಸತ್ತ ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನುವ ಆರೋಪ ಕೇಳಿ ಬಂದಿದೆ.
ಅಶ್ವಿನಿ (25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆಯಾಗಿದ್ದು, ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಕಳೆದ ಫೆಬ್ರವರಿ 28ರಂದು ಯುವರಾಜ್ ಎಂಬಾತನ ಜೊತೆ ಅಶ್ವಿನಿಯ ಮದುವೆ ಆಗಿತ್ತು. ಆರಂಭದಲ್ಲಿ ಚೆನ್ನಾಗಿದ್ದ ದಂಪತಿ, ಕೆಲ ದಿನಗಳ ಬಳಿಕ ಜ್ಯೋತಿಷಿಯೋರ್ವನನ್ನು ಗಂಡನ ಮನೆಯವರು ಭೇಟಿ ಮಾಡಿ ಅಶ್ವಿನಿಯ ಜಾತಕ ಕೇಳಿದ್ದರು. ಈ ವೇಳೆ ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದರಂತೆ.
ಈ ವಿಚಾರ ತಿಳಿಯುತ್ತಿದ್ದಂತೆ ಆಶ್ವಿನಿಗೆ ಗಂಡನ ಮನೆಯವರು ಕಿರುಕುಳ ನೀಡುತ್ತಿದ್ದರು. ಅಶ್ವಿನಿಯಿಂದ ದೂರವಾಗಲು ಗಂಡನ ಕಡೆಯವರು ನಗ-ನಾಣ್ಯ ತರುವಂತೆ ಪೀಡಿಸುತ್ತಿದ್ದರಂತೆ. ಇದೇ ವಿಚಾರಕ್ಕಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ನಿನ್ನೆ ಸಹ ಇಬ್ಬರ ನಡುವೆ ಗಲಾಟೆಯಾಗಿದೆ. ಇದರಿಂದ ಬೇಸತ್ತು ಇಂದು ಬೆಳಗ್ಗೆ ಅಶ್ವಿನಿ ಬಾತ್ ರೂಂನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.
ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆಗೆ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಗಂಡ ಯುವರಾಜ್ ಫಿಟ್ಸ್ ಬಂದಿರುವುದಾಗಿ ಹೇಳಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಸದ್ಯ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.