ಬೆಂಗಳೂರು: ಅತ್ಯಂತ ಬಡತನದಲ್ಲಿ ಬದುಕಿ ಹೊತ್ತಿನ ಊಟಕ್ಕೂ ಕಷ್ಟಪಡುವ ಸ್ಥಿತಿಯಲ್ಲಿದ್ದ ಕೃಷಿಕನೊಬ್ಬನ ಬದುಕನ್ನು ಜೇನುಕೃಷಿ ಬಂಗಾರವಾಗಿಸಿದೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಕಲ್ಲಳ್ಳಿ ಮನೆ ನಿವಾಸಿ ಮಧುಕೇಶ್ವರ ಹೆಗಡೆ ಸಾಧಕ ಕೃಷಿಕರಾಗಿದ್ದು, ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆಯುತ್ತಿರುವ 107ನೇ ರಾಷ್ಟ್ರೀಯ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ತಮ್ಮ ಕೃಷಿ ಕ್ಷೇತ್ರದ ಸಾಧನೆಯನ್ನು ಪ್ರದರ್ಶಿಸಿದ್ದಾರೆ. ಜೇನುಕೃಷಿ ಮೂಲಕ ಉತ್ತಮ ಬದುಕು ಕಟ್ಟಿಕೊಳ್ಳಬಹುದು ಎಂಬುದಕ್ಕೆ ಇವರು ಸೂಕ್ತ ಉದಾಹರಣೆಯಾಗಿದ್ದು, ಅತ್ಯಂತ ಬಡತನದಿಂದ ಮೇಲೆ ಬಂದು ಇಂದು ಜೇನುಕೃಷಿ ಅವಲಂಬಿಸಿ ಉನ್ನತ ಬದುಕು ಕಟ್ಟಿಕೊಂಡಿದ್ದಾರೆ.
ಜೇನು ಸಾಕಾಣಿಕೆ, ಜೇನಿನ ಉತ್ಪನ್ನ, ಉಪ ಉತ್ಪನ್ನಗಳ ಮಾರಾಟ ಹಾಗೂ ಜೇನು ಹುಳುಗಳ ಮೂಲಕ ಚಿಕಿತ್ಸೆ ಇತ್ಯಾದಿಗಳ ಮೂಲಕ ರಾಜ್ಯ ಹಾಗೂ ರಾಷ್ಟ್ರ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಹೆಸರು ಸಂಪಾದಿಸಿದ್ದಾರೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದು, ಜೇನುಕೃಷಿ ತಮ್ಮ ಜೀವನ ಶೈಲಿಯನ್ನು ಬದಲಿಸಿ ಬಿಟ್ಟಿದೆ. ಇದಕ್ಕಾಗಿಯೇ ಈ ಕೃಷಿಯನ್ನು ಮಾಡಲು ಬಯಸುವ ಯುವಕರಿಗೆ ಮಾರ್ಗದರ್ಶನ ನೀಡುವ ಕಾರ್ಯವನ್ನು ಮಾಡುತ್ತಿದ್ದೇನೆ. ಜೊತೆಗೆ ಜೇನು ಸಂತತಿ ಉಳಿವಿಗೆ ಅಗತ್ಯ ಜನಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ.
ಜೇನಿನ ಉಪ ಉತ್ಪನ್ನಕ್ಕೆ ದೇಶದಲ್ಲಿ ಮಾತ್ರವಲ್ಲ ವಿಶ್ವ ಮಟ್ಟದಲ್ಲಿ ಸಾಕಷ್ಟು ಜನಪ್ರಿಯತೆ ಇದ್ದು, ಇವನ್ನು ಕೂಡ ತಾವೇ ಆವಿಷ್ಕರಿಸಿದ್ದಾರೆ ವಿವರಿಸುತ್ತಾರೆ. ಜೇನು ಕೃಷಿ ಆರಂಭಿಸಿ ಜೇನುತುಪ್ಪದ ಸಂಗ್ರಹಣೆ ಹೆಚ್ಚಿನ ಪ್ರಮಾಣದಲ್ಲಿ ಆದಾಗ ಈ ರೀತಿಯ ಉಪ ಉತ್ಪನ್ನಗಳನ್ನು ಸಿದ್ಧಪಡಿಸುವ ಯೋಜನೆ ಹೊಳೆಯಿತು. ಇಂದು ಇದು ಇಂಗ್ಲೆಂಡ್ ಸೇರಿದಂತೆ ಹಲವು ರಾಷ್ಟ್ರಗಳನ್ನು ತಲುಪಿದೆ. ಜೇನು ಬೆಳೆ ಹಾಗೂ ಅದರ ಸಂರಕ್ಷಣೆ ವಿಚಾರದಲ್ಲಿ ಸಾಕಷ್ಟು ಗಮನ ಹರಿಸಿದ್ದು ದೊಡ್ಡಮಟ್ಟದಲ್ಲಿ ಜೇನುಕೃಷಿ ಅಂತ ಮನಸ್ಸು ಮಾಡುವವರಿಗೆ ಸೂಕ್ತ ತರಬೇತಿಯನ್ನು ಕೂಡ ಒದಗಿಸುವುದಾಗಿ ವಿವರಿಸಿದ್ದಾರೆ.
ಮಧುಕೇಶ್ವರ ಹೆಗಡೆ ಇಂದು ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ನಡೆದ ರೈತ ವಿಜ್ಞಾನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಭಾಷಣ ಕೂಡ ಮಾಡಿದ್ದಾರೆ. ಹಲವು ಸಾಧಕ ರೈತರನ್ನು ಕರೆಸಿ ಇಲ್ಲಿ ಅಭಿನಂದಿಸಲಾಯಿತು ಅವರಲ್ಲಿ ಇವರು ಒಬ್ಬರಾಗಿ ಪಾಲ್ಗೊಂಡಿದ್ದರು.