ಬೆಂಗಳೂರು : ನೇಮಕಾತಿ ಪರೀಕ್ಷೆಗಳಲ್ಲಿನ ಅಕ್ರಮ ರಾಜ್ಯ ಸರ್ಕಾರದ ನಿದ್ದೆಗೆಡಿಸುತ್ತಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ ಪರೀಕ್ಷೆ ಅಕ್ರಮ ಸಾಕಷ್ಟು ಸದ್ದು ಮಾಡಿತ್ತು. ಸಾಲು ಸಾಲು ನೇಮಕಾತಿ ಪರೀಕ್ಷೆ ಅಕ್ರಮಗಳಿಂದ ಅನೇಕ ಯೋಗ್ಯ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ನೇಮಕಾತಿ ಪರೀಕ್ಷೆಗಳಲ್ಲಿ ನಡೆಯುವ ಅಕ್ರಮ ತಡೆಯಲು ರಾಜ್ಯ ಸರ್ಕಾರ ಇದೀಗ ಪ್ರತ್ಯೇಕ ಕಾಯ್ದೆ ತರಲು ತೀರ್ಮಾನಿಸಿದೆ. ಅಷ್ಟಕ್ಕೂ ಈ ಉದ್ದೇಶಿತ ಕಾಯ್ದೆಯಲ್ಲಿನ ಕಠಿಣ ನಿಯಮಗಳೇನು? ಎಂಬ ವರದಿ ಇಲ್ಲಿದೆ.
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ, ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ, ಕೆಇಎ ನೇಮಕಾತಿ ಪರೀಕ್ಷೆ ಅಕ್ರಮ ಹೀಗೆ ಸಾಲು ಸಾಲು ಪರೀಕ್ಷಾ ಅಕ್ರಮಗಳು ಬೆಳಕಿಗೆ ಬರುತ್ತಲೇ ಇವೆ. ನೇಮಕಾತಿ ಪರೀಕ್ಷೆಗಳ ಅಕ್ರಮ ತಡೆಯಲು ಎಷ್ಟೇ ಕಠಿಣ ಕ್ರಮ ಕೈಗೊಂಡರು ಒಂದಲ್ಲಾ ಒಂದು ರೀತಿಯಲ್ಲಿ ಅಕ್ರಮಗಳು ನಡೆಯುತ್ತಲೇ ಇವೆ. ಇಂಥ ಅಕ್ರಮಗಳಿಂದ ಪ್ರಾಮಾಣಿಕ ಅಭ್ಯರ್ಥಿಗಳು ಅವಕಾಶ ವಂಚಿತರಾಗುತ್ತಿದ್ದಾರೆ. ಕಳೆದ ಬಿಜೆಪಿ ಅಧಿಕಾರಾವಧಿಯಲ್ಲಿ ನೇಮಕಾತಿ ಪರೀಕ್ಷೆ ಅಕ್ರಮಗಳು ಸಾಕಷ್ಟು ಸದ್ದು ಮಾಡಿದ್ದವು. ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಹಾಗೂ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
ಈ ನೇಮಕಾತಿ ಪರೀಕ್ಷೆ ಅಕ್ರಮಗಳಲ್ಲಿ ಅಧಿಕಾರಿಗಳು, ರಾಜಕೀಯ ನಾಯಕರುಗಳೇ ಭಾಗಿಯಾಗಿರುವುದು ದುರಂತವಾಗಿದೆ. ಕಾಂಗ್ರೆಸ್ ಸರ್ಕಾರ ಇತ್ತೀಚೆಗೆ ನಡೆಸಿದ ಎಫ್ಡಿಎ ನೇಮಕಾತಿಗಾಗಿ ಕೆಇಎ ಮೂಲಕ ನಡೆಸಿದ ಪರೀಕ್ಷೆಯಲ್ಲೂ ಅಕ್ರಮ ಬೆಳಕಿಗೆ ಬಂದಿದೆ. ಆ ಮೂಲಕ ಈ ಹಿಂದಿನ ನೇಮಕಾತಿ ಪರೀಕ್ಷೆ ಅಕ್ರಮ ಸಂಬಂಧ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಕಾಂಗ್ರೆಸ್ ಸರ್ಕಾರ, ಇದೀಗ ನೇಮಕಾತಿ ಪರೀಕ್ಷೆ ಅಕ್ರಮಗಳನ್ನು ತಡೆಯಲು ಕಠಿಣ ಕಾನೂನು ಜಾರಿಗೆ ತರಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ (ನೇಮಕಾತಿಯಲ್ಲಿ ಭ್ರಷ್ಟಾಚಾರ ಮತ್ತು ಅನ್ಯಾಯದ ವಿಧಾನ ತಡೆಗಟ್ಟುವಿಕೆ ಕ್ರಮಗಳು) ವಿಧೇಯಕ 2023ಕ್ಕೆ ಸಚಿವ ಸಂಪುಟ ಸಭೆಯಲ್ಲಿ ಮೊನ್ನೆ ಅನುಮೋದನೆ ನೀಡಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ವಿಧೇಯಕ ಮಂಡಿಸಲು ನಿರ್ಧರಿಸಿದೆ. ಒಳಾಡಳಿತ ಇಲಾಖೆ ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023 ರೂಪಿಸಿದೆ. ಈ ಕಾನೂನಿನಡಿ ಅಕ್ರಮ ಎಸಗಿದವರಿಗೆ ಕಠಿಣ ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ಅಪರಾಧ ಎಸಗಿದವರಿಗೆ ಶಿಕ್ಷೆ ಪ್ರಮಾಣ, ಶಿಕ್ಷೆಯಿಂದ ಪಾರಾಗದಂತೆ ಕಠಿಣ ನಿಯಮದ ಅಂಶಗಳು ಈ ವಿಧೇಯಕದಲ್ಲಿ ಇದೆ.
ತಪ್ಪಿತಸ್ಥರಿಗೆ ಕಠಿಣ ಜೈಲು ಶಿಕ್ಷೆ ಹಾಗೂ ದಂಡದ ನಿಯಮ : ಕರ್ನಾಟಕ ಪಬ್ಲಿಕ್ ಎಕ್ಸಾಮಿನೇಷನ್ ವಿಧೇಯಕ-2023ರಲ್ಲಿ ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ವಿಧೇಯಕದಲ್ಲಿ ಅಕ್ರಮ ಎಸಗಿದವರ ಮೇಲೆ ಕಠಿಣ ಸೆರೆಮನೆವಾಸ ಹಾಗೂ ಬೃಹತ್ ದಂಡ ವಿಧಿಸುವ ನಿಯಮ ಸೇರಿಸಲಾಗಿದೆ. ಒಂದು ವೇಳೆ ಪರೀಕ್ಷಾರ್ಥಿ ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿ ಅಕ್ರಮದಲ್ಲಿ ಭಾಗಿಯಾಗಿರುವುದು ದೃಢಪಟ್ಟರೆ, ಅಂಥ ಅಪರಾಧಿಗೆ ಗರಿಷ್ಠ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ನಿಯಮ ರೂಪಿಸಲಾಗಿದೆ. ಅದರ ಜೊತೆಗೆ ಬೃಹತ್ ಮೊತ್ತದ ದಂಡ ವಿಧಿಸುವ ಅಂಶವನ್ನೂ ಸೇರಿಸಲಾಗಿದೆ. 10 ಲಕ್ಷ ರೂ. ಕಡಿಮೆ ಇಲ್ಲದಂತೆ ದಂಡ ವಿಧಿಸುವ ನಿಯಮ ರೂಪಿಸಲಾಗಿದೆ. ದಂಡ ಕಟ್ಟಲು ವಿಫಲನಾದರೆ 9 ತಿಂಗಳ ಜೈಲು ಶಿಕ್ಷೆ ವಿಧಿಸಲಾಗುವುದು.
ಒಂದು ವೇಳೆ ಮೂರನೇ ವ್ಯಕ್ತಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಸಂಚು ರೂಪಿಸಿದರೆ, ಅಥವಾ ಅಕ್ರಮದಲ್ಲಿ ಭಾಗಿಯಾದರೆ ಆತನಿಗೆ 8 ವರ್ಷಕ್ಕಿಂತ ಕಡಿಮೆ ಇಲ್ಲದಂತೆ ಗರಿಷ್ಠ 12 ವರ್ಷದವರೆಗೆ ಜೈಲು ಶಿಕ್ಷೆ ವಿಧಿಸುವ ಕಾನೂನು ಸೇರಿಸಲಾಗಿದೆ. ಅದರ ಜೊತೆಗೆ ಆತನಿಗೆ 15 ಲಕ್ಷ ರೂ. ಗೆ ಕಡಿಮೆ ಇಲ್ಲದಂತೆ ಗರಿಷ್ಠ 10 ಕೋಟಿ ರೂ.ವರೆಗೆ ದಂಡ ವಿಧಿಸಲಾಗುತ್ತದೆ. ದಂಡ ಕಟ್ಟಲು ವಿಫಲನಾದರೆ ಎರಡು ವರ್ಷವರೆಗೆ ಜೈಲುವಾಸ ಅನುಭವಿಸಬೇಕು.
ತಪ್ಪಿತಸ್ಥನ ಆಸ್ತಿ ಮುಟ್ಟುಗೋಲು : ಈ ವಿಧೇಯಕದಲ್ಲಿ ಪ್ರಮುಖವಾಗಿ ತಪ್ಪಿತಸ್ಥನ ಆಸ್ತಿ ಮುಟ್ಟುಗೋಲಿನ ನಿಯಮವನ್ನೂ ಸೇರಿಸಲಾಗಿದೆ. ಅಂದರೆ ಅಕ್ರಮದಿಂದ ಗಳಿಸಿದ ಸ್ಥಿರ ಅಥವಾ ಚರ ಆಸ್ತಿಯನ್ನು ಮುಟ್ಟುಗೋಲು ಹಾಕುವ ಅಧಿಕಾರವನ್ನು ನೀಡಲಾಗಿದೆ. ರಾಜ್ಯ ಸರ್ಕಾರದ ಪೂರ್ವಾನುಮತಿಯೊಂದಿಗೆ ತಪ್ಪಿತಸ್ಥನ ಆಸ್ತಿ ಮುಟ್ಟುಗೋಲು ಹಾಕಬಹುದಾಗಿದೆ. ಒಂದು ವೇಳೆ ವಾಸ್ತವದಲ್ಲಿ ಆಸ್ತಿ ಮುಟ್ಟುಗೋಲು ಕಷ್ಟಸಾಧ್ಯವಾದರೆ, ಅದನ್ನು ಜಪ್ತಿ ಮಾಡಿ, ಆಸ್ತಿ ವರ್ಗಾವಣೆ ಮಾಡದಂತೆ ಆದೇಶ ಹೊರಡಿಸುವ ಅಧಿಕಾರವನ್ನು ತನಿಖಾಧಿಕಾರಿಗೆ ನೀಡಲಾಗಿದೆ.
ತನಿಖಾಧಿಕಾರಿ ಆಸ್ತಿ ಮುಟ್ಟುಗೋಲು ಅಥವಾ ಜಪ್ತಿ ಮಾಡಿದ ಬಗ್ಗೆ 48 ತಾಸಿನೊಳಗೆ ನಿಯೋಜಿತ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು. ನ್ಯಾಯಾಲಯಕ್ಕೆ ಆಸ್ತಿ ಮುಟ್ಟುಗೋಲು ತೆರವು ಅಥವಾ ದೃಢಪಡಿಸುವ ಅಧಿಕಾರ ಇರಲಿದೆ. ಆರೋಪಿ ತಪ್ಪಿತಸ್ಥ ಎಂದು ದೃಢಪಟ್ಟರೆ, ನ್ಯಾಯಾಲಯ ಶಿಕ್ಷೆಯ ಜೊತೆಗೆ ಸ್ಥಿರ ಹಾಗೂ ಚರ ಆಸ್ತಿ ರಾಜ್ಯ ಸರ್ಕಾರದ ಅಧೀನದಲ್ಲೇ ಇರಿಸಿ, ತೀರ್ಪು ನೀಡಬಹುದಾಗಿದೆ. ಆಸ್ತಿ ಎಂದರೆ ನಗದೂ ಒಳಗೊಂಡಿದೆ.
ಜಾಮೀನು ರಹಿತ ಅಪರಾಧ : ಉದ್ದೇಶಿತ ಕಾಯ್ದೆಯಲ್ಲಿ ಅಕ್ರಮ ಎಸಗಿದರೆ ಜಾಮೀನು ರಹಿತ ಅಪರಾಧವಾಗಲಿದೆ. ನೇಮಕಾತಿ ಪರೀಕ್ಷೆ ಅಕ್ರಮವನ್ನು ಗಂಭೀರ ಸ್ವರೂಪದ ಪ್ರಕರಣ ಎಂದು ಪರಿಗಣಿಸಲಾಗುವುದು. ಜೊತೆಗೆ ಇದನ್ನು ಸಂಯೋಜಿತವಲ್ಲದ ಪ್ರಕರಣವೆಂದು ಪರಿಗಣಿಸಲಾಗುವುದು. ಅಂದರೆ ಇಂಥ ಪ್ರಕರಣಗಳಲ್ಲಿ ರಾಜಿ ಮಾಡಿಕೊಳ್ಳುವ ಅಥವಾ ದೂರು ಹಿಂಪಡೆಯುವ ಅವಕಾಶ ಇರುವುದಿಲ್ಲ.
ಹೆಚ್ಚುವರಿ ಪೊಲೀಸ್ ಅಧೀಕ್ಷಕನಿಗಿಂತ ಕೆಳ ದರ್ಜೆಯ ಅಧಿಕಾರಿ ಈ ಪ್ರಕರಣವನ್ನು ತನಿಖೆ ಮಾಡುವ ಹಾಗಿಲ್ಲ. ಈ ಪ್ರಕರಣದ ವಿಚಾರಣೆಯನ್ನು ಪ್ರತ್ಯೇಕ ನ್ಯಾಯಾಲಯದಲ್ಲಿ ಮಾಡಲಾಗುವುದು. ರಾಜ್ಯ ಸರ್ಕಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಮಾಲೋಚಿಸಿ ಎಷ್ಟು ಬೇಕಾದರೂ ಸೆಷನ್ ಕೋರ್ಟ್ಗಳನ್ನು ಈ ಪ್ರಕರಣಗಳ ವಿಚಾರಣೆಗಾಗಿ ನಿಯೋಜಿಸಬಹುದಾಗಿದೆ.
ತಪ್ಪಿತಸ್ಥ ಪರೀಕ್ಷಾರ್ಥಿ ಡಿಬಾರ್ : ಈ ವಿಧೇಯಕದ ಪ್ರಕಾರ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಪರೀಕ್ಷಾರ್ಥಿ ಒಂದು ವೇಳೆ ತಪ್ಪಿತಸ್ಥ ಎಂದು ದೃಢಪಟ್ಟರೆ ಆತನನ್ನು ಮುಂದಿನ ಎರಡು ವರ್ಷ ಯಾವುದೇ ನೇಮಕಾತಿ ಪರೀಕ್ಷೆಗಳಿಂದ ಡಿಬಾರ್ ಆಗಲಿದ್ದಾನೆ. ನೇಮಕಾತಿ ಪರೀಕ್ಷೆಗೆ ಸಂಬಂಧ ಪಡದ ಯಾವುದೇ ವ್ಯಕ್ತಿ ಪರೀಕ್ಷಾ ಕೇಂದ್ರದ ಆವರಣದ ಪ್ರವೇಶಕ್ಕೆ ಅನುಮತಿ ನಿಷೇಧಿಸಲಾಗುತ್ತದೆ. ನಿಗದಿತ ಪರೀಕ್ಷಾ ಕೇಂದ್ರದ ಹೊರತಾಗಿ ಬೇರೆ ಎಲ್ಲೂ ಪರೀಕ್ಷೆ ನಡೆಸುವಂತಿಲ್ಲ.
ಈ ಕಾಯ್ದೆಯಡಿ ಯಾವುದೇ ಆಡಳಿತ ಮಂಡಳಿ, ಸಂಸ್ಥೆಗಳ ಗಮನಕ್ಕೆ ಅಕ್ರಮ ನಡೆದಿರುವುದು ಗೊತ್ತಾಗಿದ್ದರೆ, ಅಥವಾ ಅಕ್ರಮದಲ್ಲಿ ಭಾಗಿಯಾಗಿದ್ದರೆ, ಅಂಥ ಸಂಸ್ಥೆಗಳ ನಿರ್ದೇಶಕ, ಕಾರ್ಯದರ್ಶಿ, ಪಾಲುದಾರ, ಮ್ಯಾನೇಜರ್ ವಿರುದ್ಧವೂ ನಿಯಮದಂತೆ ಕಠಿಣ ಶಿಕ್ಷೆಗೊಳಗಾಗಲಿವೆ. ಸಂಚು ನಡೆಸಿದ ಆಡಳಿತ ಮಂಡಳಿ, ಸಂಸ್ಥೆಗಳಿಂದ ಪರೀಕ್ಷೆಯ ಒಟ್ಟು ವೆಚ್ಚವನ್ನು ವಸೂಲಿ ಮಾಡಬೇಕು ಮತ್ತು ಅದಕ್ಕೆ ಅಜೀವ ನಿಷೇಧ ಹೇರುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ.
- ಪರೀಕ್ಷೆಯ ಮುನ್ನ ಯಾವುದೇ ವ್ಯಕ್ತಿ, ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆ, ಒಎಂಆರ್ ಶೀಟ್ ಹೊಂದುವ ಹಾಗಿಲ್ಲ.
- ಪ್ರಶ್ನೆ ಪತ್ರಿಕೆ, ಒಎಂಆರ್ ಶೀಟ್ ಯಾವುದೇ ಮಾಹಿತಿ ಬಹಿರಂಗಪಡಿಸುವ ಹಾಗಿಲ್ಲ.
- ಎಲೆಕ್ಟ್ರಾನಿಕ್ ಸಾಧನ, ಗ್ಯಾಜೆಟ್ಗಳನ್ನು ಬಳಸುವ ಹಾಗಿಲ್ಲ.
ಇದನ್ನೂ ಓದಿ : ನೇಮಕಾತಿ ಪರೀಕ್ಷಾ ಅಕ್ರಮ ತಡೆಗೆ ಪ್ರತ್ಯೇಕ ಕಾಯ್ದೆ ರಚಿಸಲು ನಿರ್ಧರಿಸಿದ ಸರ್ಕಾರ