ಬೆಂಗಳೂರು: ಸುಮಾರು 150 ಕೋಟಿ ರೂ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಮಂಜೂರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾಲೂರು ಶಾಸಕ ಕೆ ವೈ ನಂಜೇಗೌಡ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲು ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡಿದೆ.
ನಂಜೇಗೌಡ 2019ರ ಜುಲೈ ತಿಂಗಳನ್ನು ನಡೆದ 4 ಸಭೆಗಳಿಗೆ ಭೂ ಸಕ್ರಮೀಕರಣ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಸಂದರ್ಭದಲ್ಲಿ ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ಬಲಾಢ್ಯರು ಮತ್ತು ಪ್ರಭಾವಿಗಳಿಗೆ ಸರ್ಕಾರಿ ಜಮೀನುಗಳನ್ನು ಮಂಜೂರು ಮಾಡಿದ್ದಾರೆ. ಅಲ್ಲದೆ, ಇಡೀ ಕ್ಷೇತ್ರದಲ್ಲಿ ಕಂದಾಯ ಇಲಾಖೆಗೆ ಸೇರಿದ 150 ಕೋಟಿ ರೂಗಳ ಮೌಲ್ಯದ 86 ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ಆ ಮೂಲಕ ಶಾಸಕರ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೋಲಾರದ ಸಾಮಾಜಿಕ ಕಾರ್ಯಕರ್ತ ಕೆ ಸಿ ರಾಜಣ್ಣ ಅವರು ಖಾಸಗಿ ದೂರು ದಾಖಲಿಸಿದ್ದರು.
ದೂರಿನ ಸಂಬಂಧ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರು ಪ್ರಕರಣದ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಮಾಲೂರು ಪೊಲೀಸ್ ಠಾಣೆಗೆ ನಿರ್ದೇಶಿಸಿದ್ದಾರೆ. ಅಲ್ಲದೆ, ಡಿಸೆಂಬರ್ 7 ರಂದು ವರದಿ ಸಲ್ಲಿಸಬೇಕು ಎಂದು ತನಿಖಾಧಿಕಾರಿಗಳಿಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಸರ್ಕಾರಿ ಜಾಗದಲ್ಲಿದ್ದ ಅಕ್ರಮ ಕಟ್ಟಡಗಳ ತೆರವು