ಬೆಂಗಳೂರು: ಹಿಂದೆಂದಿಗಿಂತಲೂ ಈ ಬಾರಿ ಚಳಿಗಾಲ ಹೆಚ್ಚು ಕಾಡಲಿದೆ. ನವೆಂಬರ್ ಆರಂಭದಲ್ಲೇ ತೀವ್ರ ಚಳಿ ಆರಂಭವಾಗಿದ್ದು, ಫೆಬ್ರವರಿ ಅಂತ್ಯದವರೆಗೆ ಕನಿಷ್ಠ ತಾಪಮಾನ ದಾಖಲಾಗಲಿದೆ.
ಪೆಸಿಫಿಕ್ ಮಹಾಸಾಗರದಲ್ಲಿ ನಿನೊ-3 ಪ್ರದೇಶದಲ್ಲಿ ನೀರಿನ ಮೇಲ್ಮೈ ತಾಪಮಾನ ಕಡಿಮೆ ಇರುವುದೇ ಇದಕ್ಕೆ ಮುಖ್ಯ ಕಾರಣ. ಹೀಗಾಗಿ, ರಾಜ್ಯದಲ್ಲಿ ಹಿಂಗಾರು ಮಳೆಯೂ ಕಡಿಮೆಯಾಗಿದೆ. ಸದ್ಯ ಅಲ್ಲಿ ಉಷ್ಣಾಂಶ 0.5ಕ್ಕಿಂತ ಕಡಿಮೆ ದಾಖಲಾಗಿದೆ. ಹೀಗಾಗಿ ಈ ಬಾರಿ ಚಳಿ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಟಿವಿ ಭಾರತ್ ಜೊತೆ ಮಾತನಾಡಿದ ಹವಾಮಾನ ಮುನ್ಸೂಚನೆ ನಿರ್ದೇಶಕ ಸಿ.ಎಸ್.ಪಾಟೀಲ್, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಚಳಿ ಇರಲಿದೆ. -1.7 ಡಿಗ್ರಿ ಸೆಂಟಿಗ್ರೇಡ್ಗಿಂತಲೂ ಕಡಿಮೆ ಇದ್ದು, ಲ್ಯಾನಿನೊ ಸ್ಥಿತಿ ಎನ್ನಲಾಗುತ್ತದೆ. ಇದರಿಂದ ದೇಶದಲ್ಲಿ 10 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ದಾಖಲಾಗುವ ಸಾಧ್ಯತೆ ಇದೆ. ಹಾಗೆಯೇ ಶೀತ ಹವೆ ಇರಲಿದೆ ಎಂದರು.
ಬೆಂಗಳೂರಲ್ಲೂ ಸಾಮಾನ್ಯ ಮಟ್ಟಕ್ಕಿಂತ ಕಡಿಮೆ ತಾಪಮಾನ ದಾಖಲಾಗಲಿದ್ದು, ಉತ್ತರ ಒಳನಾಡಿನಲ್ಲಿ ಇದರ ಪರಿಣಾಮ ಜಾಸ್ತಿ ಇರಲಿದೆ. ಕನಿಷ್ಠ ತಾಪಮಾನ ಇರುವುದರಿಂದ ಮಂಜು ಹೆಚ್ಚಾಗಲಿದೆ. ವಾತಾವರಣದಲ್ಲಿ ಗೋಚರತೆ ಕೂಡಾ ಕಡಿಮೆ ಆಗಲಿದೆ. ಈ ಬಾರಿ ಅ.28ರಿಂದಲೇ ದಕ್ಷಿಣ ಭಾರತಕ್ಕೆ ಹಿಂಗಾರು ಮಾರುತ ಕಾಲಿಟ್ಟಿದ್ದರೂ, ಹೆಚ್ಚಾಗಿ ಪ್ರಭಾವಿತವಾಗಿಲ್ಲ. ಕಳೆದ ವಾರ ಸ್ವಲ್ಪ ಮಳೆಯಾಗಿದೆ. ಮುಂದೆಯೂ ಹಗುರ ಮಳೆಯಷ್ಟೇ ಆಗಲಿದೆ ಎಂದರು.
ಹಿಂದಿನ ವರ್ಷಗಳ ಗರಿಷ್ಠ- ಕನಿಷ್ಠ ತಾಪಮಾನ ದಾಖಲಾತಿ ಪಟ್ಟಿ (ಡಿಗ್ರಿ ಸೆಲ್ಸಿಯಸ್ನಲ್ಲಿ)
ವರ್ಷ(ನವೆಂಬರ್ ತಿಂಗಳು) | ಗರಿಷ್ಠ | ಕನಿಷ್ಠ |
2019 | 30.9 | 16.7 |
2018 | 31.0 | 14.8 |
2017 | 30.0 | 15.8 |