ಬೆಂಗಳೂರು: ಖ್ಯಾತ ಹರಿಕಥಾ ವಿದ್ವಾಂಸ ಗುರುರಾಜುಲು ನಾಯ್ಡು ಪುತ್ರಿ ಶೋಭಾ ನಾಯ್ಡು ನಗರದಲ್ಲಿ ಇಂದು ವಿಧಿವಶರಾದರು. ಮೂರು ದಶಕಗಳಿಗೂ ಹೆಚ್ಚು ಕಾಲ ಹರಿಕಥೆ ಸೇವೆಸಲ್ಲಿಸಿದ ಶೋಭಾ ನಾಯ್ಡು ವೃತ್ತಿಪರ ಹರಿಕಥಾ ವಿದ್ವಾಂಸರಾಗಿರಲಿಲ್ಲ. ಆದರೆ, ಹವ್ಯಾಸಕ್ಕಾಗಿ ಆಗಾಗ ಸಮಯ ಸಿಕ್ಕಾಗ ಹರಿಕಥೆ ನಡೆಸಿಕೊಡುವ ಕಾರ್ಯ ಮಾಡುತ್ತಿದ್ದರು. ತಂದೆ ಗುರುರಾಜುಲು ನಾಯ್ಡು ಅವರಿಗೆ ಪುತ್ರಿ ಹರಿಕಥೆ ಮಾಡುವುದು ಅಷ್ಟಾಗಿ ಇಷ್ಟವಿರಲಿಲ್ಲ. ಈ ಹಿನ್ನೆಲೆ ಪುತ್ರಿಯನ್ನು ಬೇರೆ ಉದ್ಯೋಗದತ್ತ ಮುಖ ಮಾಡುವಂತೆ ಮಾಡಿದ್ದರು.
ಭಾರತೀಯ ವಿಮಾನ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ಶೋಭಾ ನಾಯ್ಡು ಬೆಂಗಳೂರಿನ ಗಾಯತ್ರಿ ನಗರದಲ್ಲಿ ವಾಸವಾಗಿದ್ದರು. ಸಮಯ ಸಿಕ್ಕಾಗೆಲ್ಲಾ ಹರಿಕಥೆ ಮಾಡುತ್ತಾ ನಾಟಕಗಳಲ್ಲಿ ಅಭಿನಯಿಸುತ್ತಾ ಕಲಾಪ್ರಪಂಚದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವಂತೆ ಮಾಡಿದ್ದರು. ಕಿಡ್ನಿ ಸಮಸ್ಯೆಯಿಂದ ಕೆಲ ದಿನಗಳಿಂದ ಬಳಲುತ್ತಿದ್ದ ಶೋಭಾ ನಾಯ್ಡು ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ನಿಧನರಾಗಿದ್ದಾರೆ.
ಕೊರೊನಾ ಅಟ್ಟಹಾಸ ಹಿನ್ನೆಲೆ ಮಹಾನಗರ ಸೇರಿದಂತೆ ರಾಜ್ಯದಲ್ಲಿ ಲಾಕ್ಡೌನ್ ಇರುವ ಕಾರಣ ಕೆಲವೇ ಕೆಲವು ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಹಲವು ಗಣ್ಯರು ಮೃತರ ಗುಣಗಾನ ಮಾಡಿ ಸಂತಾಪ ಸೂಚಿಸಿದ್ದಾರೆ.
ಗುರುರಾಜುಲು ನಾಯ್ಡು ಹಾಗೂ ಪ್ರೇಮ ನಾಯ್ಡು ಅವರ ಆರು ಮಂದಿ ಮಕ್ಕಳಲ್ಲಿ ಶೋಭಾ ನಾಯ್ಡು ಒಬ್ಬರಾಗಿದ್ದರು. ಪುತ್ರಿ ವೈದ್ಯ ಆಗಲಿ ಎಂದು ಆಶಿಸಿದ್ದ ನಾಯ್ಡು ಕುಟುಂಬದವರು ಈ ನಿಟ್ಟಿನಲ್ಲಿ ಸಾಕಷ್ಟು ಒತ್ತಡ ಹೇರಿದ್ದರು. ತಂದೆಯಿಂದ ರಕ್ತಗತವಾಗಿ ಬಂದ ಕಲೆಯನ್ನು ಅವಕಾಶ ಸಿಕ್ಕಾಗ ಪೋಷಿಸುತ್ತಿದ್ದ ಶೋಭ ನಾಯ್ಡು ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಾತ್ರವಲ್ಲದೇ ಮಹಾರಾಷ್ಟ್ರ ಆಂಧ್ರಪ್ರದೇಶದಲ್ಲಿ ಹರಿಕಥೆ ನಡೆಸಿಕೊಟ್ಟಿದ್ದಾರೆ. ಸಾಕಷ್ಟು ಮಕ್ಕಳಿಗೆ ಹರಿಕಥೆಯನ್ನು ಹೇಳಿಕೊಟ್ಟಿದ್ದರು. ತಮ್ಮಂತೆಯೇ ತಮ್ಮ ಸೋದರಿ ಶೀಲ ನಾಯ್ಡು ಅವರನ್ನು ಕೂಡ ಹರಿಕಥೆಯತ್ತ ಆಸಕ್ತಿ ತೋರಿಸಲು ಪ್ರೇರೇಪಿಸಿದ್ದರು.