ಬೆಂಗಳೂರು: ಅಪರೂಪದ ಪ್ರಾಣಿ, ಕಾಡುಪಾಪ ಸಿಲಿಕಾನ್ ಸಿಟಿಯಲ್ಲಿ ಕಂಡುಬಂದು ಅಚ್ಚರಿ ಮೂಡಿಸಿದೆ. ಮಲ್ಲೇಶ್ವರಂನ ವೈಯಾಲಿಕಾವಲ್ನ ಮನೆಯೊಂದರಲ್ಲಿ ಬೈಕ್ ಮೇಲೆ ಕುಳಿತಿದ್ದ ಕಾಡುಪಾಪವನ್ನು ಕಂಡು ಮನೆಯವರು ಬೆಕ್ಕೆಂದು ತಿಳಿದು ಸುಮ್ಮನಾಗಿದ್ದರು. ಸುಮಾರು ಹೊತ್ತು ಅಲ್ಲೇ ಇದ್ದುದ್ದನ್ನು ಕಂಡು, ಪಾಲಿಕೆಯ ವನ್ಯ ಜೀವಿ ಸಂರಕ್ಷಕರಿಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಬಂದ ರಾಜೇಶ್ ಕುಮಾರ್, ಕಾಡುಪಾಪದ ಎಡಗೈ ವಿದ್ಯುತ್ ಅಪಘಾತದಿಂದ ಸುಟ್ಟು ಹೋಗಿರುವುದನ್ನು ಗಮನಿಸಿದ ಅವರು, ತಕ್ಷಣವೇ ಕೆಂಗೇರಿಯ ವೈಲ್ಡ್ ಲೈಫ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕಾಡುಪಾಪಗಳು ಗುಂಪಲ್ಲಿ ವಾಸಿಸುವ, ಕೋತಿಗಳ ಜಾತಿಯ ಪ್ರಾಣಿ. ಹೀಗಾಗಿ ಗುಣವಾದ ಬಳಿಕ ಅದರ ಮೂಲಸ್ಥಾನಕ್ಕ ಬಿಡಬೇಕು, ಅವು ಕುಟುಂಬದ ಜೊತೆ ವಾಸಿಸುವ ಪ್ರಾಣಿ ಎಂದರು. ಇವು ನಿಶಾಚರಿಯಾಗಿದ್ದು, ಹಗಲಲ್ಲಿ ನಿದ್ದೆ ಮಾಡುತ್ತವೆ. ಹೆಚ್ಚಾಗಿ ಮರದ ಮೇಲೆಯೇ ಇರುತ್ತವೆ. ಕಳೆದ ವರ್ಷ ಜಯನಗರದಲ್ಲೊಂದು ಕಾಡುಪಾಪವನ್ನು ರಕ್ಷಿಸಲಾಗಿತ್ತು. ಅವು ಬಹಳ ಅಪರೂಪದ ಹಾಗೂ ನಶಿಸಿ ಹೋಗುತ್ತಿರುವ ಪ್ರಬೇಧವಾಗಿದ್ದು, ಶೆಡ್ಯೂಲ್ ಒಂದರಡಿಯಲ್ಲಿ ಸಂರಕ್ಷಿಸಲ್ಪಡುವ ಪ್ರಾಣಿಯಾಗಿದೆ. ಹಿಂದೆಲ್ಲ ಮೂಢ ನಂಬಿಕೆಗಳ ಕಾರಣದಿಂದ ಹಾಗೂ ಮಾರಾಟದ ಉದ್ದೇಶಕ್ಕೆ ಕಾಡುಪಾಪಗಳನ್ನು ದುರ್ಬಳಕೆ ಮಾಡಲಾಗುತ್ತಿತ್ತು.
ಇತ್ತೀಚೆಗೆ ನಗರೀಕರಣದ ಕಾರಣದಿಂದ ಮರಗಳ ಮೇಲೆಯೂ ವಿದ್ಯುತ್ ತಂತಿಗಳು, ಕೇಬಲ್ ಗಳು ಇರುವುದಿಂದ, ವಿದ್ಯುತ್ ಸ್ಪರ್ಷವಾಗಿ ಸುಟ್ಟುಹೋಗಿರುವ ಸಾಧ್ಯತೆ ಇದೆ ಎಂದು ರಾಜೇಶ್ ತಿಳಿಸಿದರು. ಸಧ್ಯ ಎಡಭಾಗದ ಮುಂಗಾಲು ಸುಟ್ಟು ಹೋಗಿದ್ದರಿಂದ ಬಹಳ ದಯನೀಯ ಸ್ಥಿತಿಯಲ್ಲಿದ್ದ ಕಾಡುಪಾಪವನ್ನು ರಕ್ಷಿಸಲಾಗಿದೆ.