ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಹೊರಿಸಿ ಸಹೋದ್ಯೋಗಿಯಿಂದ ಸುಳ್ಳು ದೂರು ದಾಖಲಾಗಿದೆ ಎಂದು ವ್ಯಕ್ತಿಯೊಬ್ಬರು ಅಶೋಕನಗರ ಠಾಣಾ ಮೆಟ್ಟಿಲೇರಿದ್ದಾರೆ.
ಸೋನಂ ಮಹಾಜನ್ ಎಂಬಾಕೆ ನನ್ನ ವಿರುದ್ಧ ದೂರು ದಾಖಲಿಸಿದ್ದಾರೆ. ಇದಕ್ಕೆಲ್ಲಾ ಆಕೆಯ ಪತಿ ಸೌರಭ್ ಸಿಂಗ್ ಸಾಥ್ ನೀಡಿದ್ದಾರೆ ಎಂದು ಅಭಿನವ್ ಖರೆ ಎಂಬುವವರು ದೂರು ದಾಖಲಿಸಿದ್ದಾರೆ.
ಈ ಹಿಂದೆ ತಾನು ಸೀನಿಯರ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಸೋನಂ ತನ್ನೊಂದಿಗೆ ಅಶ್ಲೀಲವಾಗಿ ಮಾತನಾಡುವುದು, ಡೇಟಿಂಗ್ ವೆಬ್ ಸೈಟ್ ವಿಚಾರವಾಗಿ ಮಾತನಾಡುವುದು ಮಾಡುತ್ತಿದ್ದಳು. ಆದರೆ ಅದಕ್ಕೆ ಮನ್ನಣೆ ನೀಡದಿದ್ದಾಗ ಮತ್ತು ಆಕೆಯ ಕೆಲಸದ ವಿಚಾರವಾಗಿ ಕಟ್ಟುನಿಟ್ಟಾಗಿದ್ದಾಗ, ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಬಸವನಗುಡಿಯ ಮಹಿಳಾ ಠಾಣೆಗೆ ದೂರು ನೀಡಿದ್ದಳು ಎಂದು ದೂರಿನಲ್ಲಿ ಹೇಳಿದ್ದಾರೆ.
ಆದರೆ ಸರಿಯಾದ ಸಾಕ್ಷಿಗಳಿಲ್ಲದೆ ಪೋಲಿಸರು ಪ್ರಕರಣಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದರು. ಆದರೂ ಸಹ ಮಹಿಳೆ ಸೋನಂ ಮತ್ತು ಆಕೆಯ ಗಂಡ ನನಗೆ ಕರೆ ಮಾಡಿ ಬೆದರಿಸಿ, ಹಣಕ್ಕಾಗಿ ಡಿಮ್ಯಾಂಡ್ ಮಾಡುತ್ತಿದ್ದಾರೆ ಎಂದು ಆರೋಪಿಸಿರುವ ಅಭಿನವ್ ಸುಳ್ಳು ದೂರು ನೀಡಿರುವ ಸೋನಂ ಮತ್ತಾಕೆಯ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ.