ಆನೇಕಲ್(ಬೆಂಗಳೂರು): ಆನೇಕಲ್ ಕೋರ್ಟಿಗೆ ಬಂದಿದ್ದರೆನ್ನಲಾದ ವ್ಯಕ್ತಿಯನ್ನು ನಡು ರಸ್ತೆಯಲ್ಲಿಯೇ ಗುಂಡು ಹಾರಿಸಿ ನಂತರ ಕೊಚ್ಚಿ ಕೊಲೆ ಮಾಡಿರುವ ಭೀಭತ್ಸ ಘಟನೆ ಬುಧವಾರ ನಡೆದಿದೆ. ಆನೇಕಲ್-ಚಂದಾಪುರ ಮುಖ್ಯರಸ್ತೆಯಲ್ಲಿರುವ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅವರ ಮನೆ ಮುಂಭಾಗದಲ್ಲೇ ನೆತ್ತರು ಹರಿದಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಕಾರನ್ನ ಅಡ್ಡಗಟ್ಟಿದ ಕಿರಾತಕರು ನಂತರ ಕಾರಿನ ಬಲಗಡೆಯ ಗಾಜನ್ನ ಒಡೆದು, ಗುಂಡು ಹಾರಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಕಾರಿನಲ್ಲಿದ್ದ ಆ ವ್ಯಕ್ತಿಯನ್ನು ಕೊಚ್ಚಿ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ. ಮೃತ ವ್ಯಕ್ತಿಯನ್ನ ಬಿಟಿಎಂ ಲೇಔಟ್ ನಿವಾಸಿ ಎನ್ನಲಾಗಿದ್ದು, ಕಾರಿನಲ್ಲಿ ಹೆಚ್ಚು ದಾಖಲೆಗಳು ಪತ್ತೆಯಾಗಿವೆ.
ಕಾರಿನಲ್ಲಿ ರಕ್ತದ ಮಡುವಿನಲ್ಲಿ ಕುಳಿತ ಸ್ಥಿತಿಯಲ್ಲಿ ವ್ಯಕ್ತಿ ಮೃತಪಟ್ಟಿದ್ದು, ಈ ಕೊಲೆಯಿಂದ ಆನೇಕಲ್ ಜನತೆ ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಎಎಸ್ಪಿ ಲಕ್ಷ್ಮಿ ಗಣೇಶ್, ಡಿವೈಎಸ್ಪಿ ಮಲ್ಲೇಶ್, ಸಿಐ ಮಹಾನಂದ್ ಸ್ಥಳಕ್ಕಾಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.