ಬೆಂಗಳೂರು : ಕೃಷ್ಣಾ ನದಿ ಪ್ರವಾಹದ ಭೀತಿಯಲ್ಲಿ ಜೀವನ ಸಾಗಿಸುತ್ತಿರುವ 38 ಹಳ್ಳಿಗಳ ಜನರ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಅವರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಸರ್ಕಾರಕ್ಕೆ ಈ ವಿಚಾರದಲ್ಲಿ ಯಾವುದೇ ಅನುಮಾನ ಇದ್ದಲ್ಲಿ ತಜ್ಞರ ಸಮಿತಿಯನ್ನು ಬೇಕಾದರೂ ರಚಿಸಲಿ ಎಂದು ಕಾಂಗ್ರೆಸ್ ಸದಸ್ಯ ಬಿ ಆರ್ ತಿಮ್ಮಾಪುರ ಒತ್ತಾಯಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತದ ಕಾಮಗಾರಿ ವಿಳಂಬ ಕುರಿತು ನಿಯಮ 68ರ ಅಡಿಯಲ್ಲಿ ನಡೆದ ಚರ್ಚೆಯಲ್ಲಿ ಮಾತನಾಡಿದ ಅವರು, ಪ್ರವಾಹದಿಂದ ಆಗುತ್ತಿರುವ ಅನಾಹುತದ ಕುರಿತು ಬೆಳಕು ಚೆಲ್ಲಿದರು. ನೀರಿನ ನಿರ್ವಹಣೆಯಲ್ಲಿ ಅಲ್ಲಿನ ಅಧಿಕಾರಿಗಳ ತಪ್ಪಿನಿಂದ ಜಲಾಶಯದಲ್ಲಿ ನೀರು ನಿಂತು ಪ್ರವಾಹವಾಗುತ್ತಿದೆ ಎಂದು ಹೇಳಿದರು.
ಆಲಮಟ್ಟಿ ಜಲಾಶಯದಿಂದ ನಮಗೆ ಹಾನಿಯಾಗುತ್ತಿದೆ. ಇದನ್ನು ಸರ್ಕಾರ ಗಮನಿಸಬೇಕು. 38 ಹಳ್ಳಿಗಳ ಜನ ಪ್ರತಿ ವರ್ಷ ಪ್ರವಾಹದ ಭೀತಿಯಲ್ಲೇ ಬದುಕುತ್ತಿದ್ದಾರೆ. ಮಳೆ ಹೆಚ್ಚಾದರೆ ಎತ್ತರದ ಸ್ಥಳ ಹುಡುಕಿಕೊಂಡು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಹಾಗಾಗಿ, ಆಲಮಟ್ಟಿ ಜಲಾಶಯದಿಂದ ಆಗುತ್ತಿರುವ ತೊಂದರೆ ಎಂದು ಪರಿಗಣಿಸಿ ಬಾಧಿತರಿಗೆ ಸೂಕ್ತ ಪರಿಹಾರ ನೀಡಬೇಕು. ಇದರಲ್ಲಿ ನಿಮಗೆ ಅನುಮಾನಗಳಿದ್ದಲ್ಲಿ ತಜ್ಞರ ಸಮಿತಿ ಮಾಡಿ ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಕಾಂಗ್ರೆಸ್ ಸದಸ್ಯ ಪ್ರಕಾಶ್ ರಾಥೋಡ್, ಕೃಷ್ಣಾ ಮೇಲ್ದಂಡೆ 3ನೇ ಹಂತದ ಯೋಜನೆ ಜಾರಿಯ ಜೊತೆಯಲ್ಲಿ ಆಲಮಟ್ಟಿ ಜಲಾಶಯವನ್ನು ಎತ್ತರಿಸಬೇಕು ಎನ್ನುವುದು ನಮ್ಮ ಬೇಡಿಕೆಯಾಗಿದೆ. ಹಾಗಾದಲ್ಲಿ ಮಾತ್ರ ನಮ್ಮ ಪಾಲಿನ ನೀರು ಸದ್ಬಳಕೆ ಸಾಧ್ಯವಾಗಲಿದೆ. ಜಲಾಶಯದ ಎತ್ತರದಿಂದ ಮುಳುಗಡೆ ಸಹಜ.
ಬೇನಾಳ ಗ್ರಾಮದವನಾದ ನಾನು ಇಡೀ ಯೋಜನೆಯ ಮೊದಲ ಸಂತ್ರಸ್ತನಾಗಿದ್ದೇನೆ. ಮೊದಲ ಹಂತದಲ್ಲೇ ನಮಗೆ ಪರಿಹಾರ ಕೊಡಲಾಗಿದೆ. ಆದಷ್ಟು ಬೇಗ ಭೂಸ್ವಾಧೀನ ಪ್ರಕ್ರಿಯೆ ಸೇರಿ ಎಲ್ಲ ಕೆಲಸ ಮುಗಿದ ಯೋಜನೆ ಅನುಷ್ಠಾನಕ್ಕೆ ತರಬೇಕು ಎಂದರು.
ಉತ್ತರಿಸುವ ಸಚಿವರೇ ಇಲ್ಲ ಎಂದು ಚರ್ಚೆ ಮೊಟಕು : ಕೃಷ್ಣಾ ಮೇಲ್ದಂಡೆ ಕುರಿತು ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಕಾಂಗ್ರೆಸ್ ಸದಸ್ಯ ಮಹಾಂತೇಶ್ ಇಟಗಿ, ಯೋಜನೆ ವಿಳಂಬಕ್ಕೆ ಬೇಸರ ವ್ಯಕ್ತಪಡಿಸಿದರು. ಯೋಜನೆಯ ಅಗತ್ಯತೆ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದರು. ಈ ವೇಳೆ ಸದನದಲ್ಲಿ ಚರ್ಚೆ ನಡೆಸುವಾಗ ಮಂತ್ರಿಗಳೇ ಇಲ್ಲ.
ಯಾಕೆ ಮಾತನಾಡುತ್ತೀರಾ ಎಂದು ಜೆಡಿಎಸ್ನ ಮರಿತಿಬ್ಬೇಗೌಡ ಮಧ್ಯಪ್ರವೇಶ ಮಾಡಿದರು. ಇದಕ್ಕೆ ದನಿಗೂಡಿಸಿದ ಇಟಗಿ ಹಸಿವಾಗಿದೆ ಬಿಡಿ ಸರ್ ಎಂದು ಸಭಾಪತಿಗಳಿಗೆ ಮನವಿ ಮಾಡಿದರು. ಈ ವೇಳೆ ಉತ್ತರ ಕೊಡುವ ಮಂತ್ರಿಗಳೇ ಇಲ್ಲ ಎಂದು ಮಧ್ಯಪ್ರವೇಶ ಮಾಡಿದ ಸಿಎಂ ಇಬ್ರಾಹಿಂ ಸಚಿವರಿಲ್ಲದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಎಂ ಇಬ್ರಾಹಿಂ ಮಾತಿಗೆ ಗರಂ ಆದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಚರ್ಚೆಗೆ ಉತ್ತರ ಕೊಡಲು ಸರ್ಕಾರ ಸಿದ್ಧವಿದೆ ಎಂದು ತಿರುಗೇಟು ನೀಡಿದರು. ಸದನಕ್ಕೆ ಸಚಿವರನ್ನ ಪರಿಚಯ ಮಾಡುವ ಸಂದರ್ಭದಲ್ಲಿ ನಾನು ಸದನದಲ್ಲಿ ಇರಲಿಲ್ಲ. ನಿನ್ನೆ ನೀವು ಸಚಿವರಿಗೆಲ್ಲಾ ಅನಾಥ ಶಿಶುಗಳು ಎಂದು ಪದ ಬಳಸಿದ್ದೀರಿ. ನೀವು ಹಿರಿಯರಾಗಿ ಹೀಗೆ ಮಾತನಾಡುವುದು ಸರಿ ಇಲ್ಲ. ನಿರ್ದಿಷ್ಟ ಕಾರಣಕ್ಕಾಗಿ ಅನಿವಾರ್ಯಕ್ಕಾಗಿ ಹೋಗಿದ್ದೆ ಎಂದರು.
ಈ ವೇಳೆ ಸಭಾನಾಯಕರು ನನ್ನ ಬಳಿ ಅವಕಾಶ ಕೇಳಿ ಹೋಗಿದ್ದರು ಎಂದು ಸಭಾಪತಿ ಬಸವರಾಜ ಹೊರಟ್ಟಿ ಮಾಹಿತಿ ನೀಡಿದರು. ನನಗೆ ಆ ವಿಚಾರ ಗೊತ್ತಿರಲಿಲ್ಲ ಎಂದು ಸಿಎಂ ಇಬ್ರಾಹಿಂ ಸ್ಪಷ್ಟೀಕರಣ ನೀಡಿದರು. ನಂತರ ಸದನದಲ್ಲಿ ಜಲಸಂಪನ್ಮೂಲ ಸಚಿವರು ಇಲ್ಲದ ಕಾರಣಕ್ಕೆ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿಕೆ ಮಾಡಿ ಸಚಿವರಿಲ್ಲ ಎನ್ನುವ ವಿವಾದಕ್ಕೆ ಸಭಾಪತಿಗಳು ತೆರೆ ಎಳೆದರು.