ಬೆಂಗಳೂರು : ದಿನ ಕಳೆದಂತೆ ಜನರ ಮಾನಸಿಕ ಅನಾರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತಿವೆ. ಈ ನಿಟ್ಟಿನಲ್ಲಿ ನಗರ ಪ್ರದೇಶಗಳೇ ಮೊದಲ ಸ್ಥಾನವನ್ನ ಗಿಟ್ಟಿಸಿಕೊಂಡಿವೆ.
ಮಾನಸಿಕ ಅನಾರೋಗ್ಯದ ಸಾಂದ್ರತೆಯು ಮೆಟ್ರೋ ನಗರ ಭಾಗದಲ್ಲಿ 13.1% ಗಳಷ್ಟಿದ್ದರೆ, ಮೆಟ್ರೋ ಅಲ್ಲದ ನಗರಗಳಲ್ಲಿ 9.3% ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಇದು 9.2%ಗಳಷ್ಟಿದೆ. ಭಾರತದ ನಗರಗಳಲ್ಲೇ ಮಾನಸಿಕ ರೋಗ ಸಮಸ್ಯೆ ಹೆಚ್ಚಿವೆ. ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಬಹಳ ಮುಖ್ಯವಾಗಿದೆ.
ಹೀಗಾಗಿ, ಬೆಂಗಳೂರಿನ ನಿಮ್ಹಾನ್ಸ್ ಸಂಸ್ಥೆಯು ಜನ ಆರೋಗ್ಯ ಕೇಂದ್ರ, ಸಮುದಾಯ ಮನೋ ಚಿಕಿತ್ಸಾ ಘಟಕ ಮತ್ತು ಟೆಲಿ ಮೆಡಿಸಿನ್ ಕೇಂದ್ರ, ಮನೋ ಚಿಕಿತ್ಸಾ ವಿಭಾಗ ಸೇರಿ, ದೇಶದ ನಾನಾ ಜಿಲ್ಲೆಗಳಲ್ಲಿ ರಾಷ್ಟ್ರೀಯ ಮಾನಸಿಕ ಸಮೀಕ್ಷೆಯನ್ನ ನಡೆಸಲಿದೆ.
ಇದರ ಮೊದಲ ಹಂತವಾಗಿ ರಾಜ್ಯದ ಕೋಲಾರದಿಂದಲ್ಲೇ ಈ ಸಮೀಕ್ಷೆಯನ್ನ ಕೈಗೊಂಡಿರುವುದಾಗಿ ಎಪಿಡಿಮಿಯಾಲಿಜಿ ವಿಭಾಗದ ಮುಖ್ಯಸ್ಥ ಪ್ರದೀಪ್ ಬಾನಂದೂರು ತಿಳಿಸಿದರು.
ಇಂದು ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಆಯೋಜಿಸಿ ನಂತರ ಪ್ರತಿಕ್ರಿಯಿಸಿದ ಅವರು, ಪೈಲಟ್ ಪ್ರಾಜೆಕ್ಟ್‌ನ ಮೊದಲ ಹಂತದಲ್ಲಿ ಕರ್ನಾಟಕದ ಕೋಲಾರ ಜಿಲ್ಲೆಯಿಂದ ಸರ್ವೇ ಶುರುವಾಗಿ ನಂತರ ಕೇರಳ, ತಮಿಳುನಾಡು, ಗುಜರಾತ್, ರಾಜಸ್ಥಾನ್ ಮತ್ತು ಅಸ್ಸೋಂ, ಮಣಿಪುರ, ಪಂಜಾಬ್,ಛತ್ತೀಸ್‌ಗಢ ಹಾಗೂ ಯುಪಿ, ಜಾರ್ಖಂಡ್, ಮಧ್ಯಪ್ರದೇಶ, ವೆಸ್ಟ್ ಬೆಂಗಾಲ್‌ನಲ್ಲಿ ರಾಷ್ಟ್ರೀಯ ಮಾನಸಿಕ ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.
2015-16ರಲ್ಲೇ ಭಾರತದ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಮೀಕ್ಷೆಯನ್ನ ಕೈಗೊಂಡು, ಎಲ್ಲ ರೂಪುರೇಷೆಗಳನ್ನ ಸಿದ್ದಗೊಂಡು ಸಮೀಕ್ಷೆ ಮುಗಿಸಿದೆ. ಮಾನಸಿಕ ಆರೋಗ್ಯದ ಬಗ್ಗೆ ಹೆಚ್ಚು ಒತ್ತು ನೀಡುವಂತಹ ವರದಿ ತಯಾರಿಸಿ ಮುನ್ನಡೆಯುತ್ತಿದ್ದೇವೆ.
ಇದೀಗ ಈ ಸಮೀಕ್ಷೆಯನ್ನ ಇಡೀ ದೇಶದ್ಯಾಂತ 12 ಜಿಲ್ಲೆಯಲ್ಲಿ ಫೇಸ್ ಒಂದರಲ್ಲಿ ಕೈಗೊಂಡಿದ್ದೇವೆ. ಇದಕ್ಕೂ ಮುನ್ನ ಪೈಲಟ್ ಸರ್ವೇಯನ್ನ ಕೋಲಾರದಲ್ಲಿ ಮಾಡಿ, ಅದರಲ್ಲಿ ಬರೋ ಎಲ್ಲ ಅಂಶಗಳನ್ನ ಪರಿಗಣಿಸಿ ರಾಷ್ಟ್ರದ್ಯಾಂತ ಸಮೀಕ್ಷೆ ಸರ್ವೇ ಮಾಡುವುದಾಗಿ ತಿಳಿಸಿದರು.