ಬೆಂಗಳೂರು: ಗಂಡನ ಅನುಮಾನದ ನಡವಳಿಕೆಗೆ ಬೇಸತ್ತ ಮಹಿಳೆವೋರ್ವಳು ಅಪಾರ್ಟ್ಮೆಂಟ್ನಿಂದ ಮಗು ತಳ್ಳಿ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಲ್ಲಿನ ಆರ್.ಟಿ. ನಗರದ ಅಪಾರ್ಟ್ಮೆಂಟ್ವೊಂದರಲ್ಲಿ ಈ ದುರ್ಘಟನೆ ನಡೆದಿದೆ.
ಮಹಿಳೆ ಗಂಡನ ಕಿರುಕುಳದಿಂದಲೇ ಹೀಗೆ ಮಾಡಿಕೊಂಡಿದ್ದಾಳೆ ಎಂದು ತನಿಖೆಯ ವೇಳೆ ತಿಳಿದುಬಂದಿದೆ ಎನ್ನಲಾಗ್ತಿದೆ. ಪೊಲೀಸರು ಮೃತಳ ಮೊಬೈಲ್ ಪರಿಶೀಲಿಸಿದಾಗ ಆಕೆಯ ಗಂಡ ಅರಿಹಂತ್ ಜೊತೆ ಮಾಡಿರುವ ಮೆಸೇಜ್ಗಳು ಲಭ್ಯವಾಗಿವೆ. ಅದರಲ್ಲಿ ಪತ್ನಿ ಮೇಲೆ ಪತಿ ಅರಿಹಂತನಿಗೆ ಅನುಮಾನವಿತ್ತು ಅನ್ನೋದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯ ಪತಿ ಅರಿಹಂತ್ ವಿರುದ್ಧ ಕೊಲೆ ಕೇಸ್ ದಾಖಲಿಸಿಕೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ. ಮೊಬೈಲ್ನಲ್ಲಿ ಪತಿ- ಪತ್ನಿ ಮಧ್ಯೆ ನಡೆದಿರುವ ಸಂವಹನ ಸಂದೇಶಗಳು ಕೊಲೆಗೆ ಪ್ರಚೋದನೆ ನೀಡಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
ಮತ್ತೊಂದೆಡೆ ಮೃತಳ ಕುಟುಂಬಸ್ಥರಿಗೆ ಅರಿಹಂತ್ ತಂದೆ ಬೆದರಿಕೆ ಹಾಕಿದ್ದಾರೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗ್ತಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಎರಡು ಎಫ್.ಐ.ಆರ್ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.