ಬೆಂಗಳೂರು: ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆ ಬಳಿಕ ಸಭೆ ನಡೆಸಲು ಸಮಾನ ಮನಸ್ಕ ಶಾಸಕರು ನಿರ್ಧರಿಸಿದ್ದಾರೆ.
ಮೇ 19ಕ್ಕೆ ಚಿಂcಓಳಿ ಹಾಗೂ ಕುಂದಗೋಳ ಕ್ಷೇತ್ರದ ಉಪಚುನಾವಣೆಗೆ ಮತದಾನ ನಡೆಯಲಿದೆ. ಇದರ ಫಲಿತಾಂಶ ಕೂಡ ಮೇ 23ಕ್ಕೆ ಬರಲಿದೆ. ಆ ನಂತರ ಸಭೆ ನಡೆಸಲು ಸಮಾನ ಮನಸ್ಕರು ನಿರ್ಧರಿಸಿದ್ದಾರೆ. ಎಸ್.ಟಿ.ಸೋಮಶೇಖರ್ ಕರೆದಿರುವ ಶಾಸಕರ ಸಭೆ ಈ ಹಿಂದೆಯೇ ನಡೆಯಬೇಕಿತ್ತು. ಆದರೆ ಉಪಚುನಾವಣೆ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಅಪಸ್ವರ ಎತ್ತುವುದು ಬೇಡ ಎಂದು ಕಾಂಗ್ರೆಸ್ ರಾಜ್ಯ ನಾಯಕರು ಸೂಚಿಸಿದ್ದರಿಂದ ಸಭೆ ಮುಂದೂಡಲಾಗಿತ್ತು.
ಅಲ್ಲದೇ ಸೋಮಶೇಖರ್ ಕರೆದ ಸಭೆಗೆ ಕೆಲವು ಶಾಸಕರು ಪಾಲ್ಗೊಳ್ಳಲು ನಿರಾಸಕ್ತಿ ತೋರಿಸಿದ್ದರು. ಇನ್ನೊಂದೆಡೆ ಶಾಸಕರ ಒನ್ ಟು ಒನ್ ಚರ್ಚೆಗೆ ಸಿಎಂ ಕೂಡ ಮುಂದಾಗಿದ್ದಾರೆ. ಇದರಿಂದ ಸಭೆ ಮುಂದೂಡುವಂತೆ ಸೂಚಿಸಲಾಗಿತ್ತು. ಎರಡು ದಿನದ ಹಿಂದೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೂಡ ಈ ವಿಚಾರ ಚರ್ಚೆಗೆ ತರುವಂತೆ ಸಮಾನ ಮನಸ್ಕ ಶಾಸಕರು ಒತ್ತಾಯಿಸಿದ್ದರು ಎನ್ನಲಾಗಿದೆ.
ಚುನಾವಣೆ ಫಲಿತಾಂಶದ ಬಳಿಕ ಸಭೆ ನಡೆಸಲಿರುವ ಹೆಚ್ಡಿಕೆ, ಪ್ರತಿ ಶಾಸಕರ ಸಮಸ್ಯೆ ಆಲಿಸಲಿದ್ದಾರೆ. ಫಲಿತಾಂಶ ಬಂದ ಒಂದೆರಡು ದಿನ ಇಲ್ಲವೇ ವಾರದ ಬಳಿಕ ಸಭೆ ನಡೆಯಲಿದ್ದು, ಅಲ್ಲಿ ತಾವೆಲ್ಲಾ ಒಕ್ಕೊರಲಿನಿಂದ ಯಾವ ಪ್ರಸ್ತಾವ ಮುಂದಿಡಬೇಕೆಂಬ ಕುರಿತು ಸಮಾನ ಮನಸ್ಕ ಶಾಸಕರು ಒಂದೆಡೆ ಸೇರಿ ಚರ್ಚಿಸಲಿದ್ದಾರೆ.