ಬೆಂಗಳೂರು: ಇಂದು ಬೆಳಗ್ಗೆ ಬೆಂಗಳೂರಲ್ಲಿ ಹಣದ ಮಳೆ ಸುರಿಸಿರುವ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಕೆಆರ್ ಮಾರ್ಕೆಟ್ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ನಡೆದಿದೆ. ಇಂದು ಬೆಳಗ್ಗೆ ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲಿಂದ ಹಣ ಎಸೆದಿದ್ದರಿಂದ ಸ್ಥಳದಲ್ಲಿ ನೋಟಿನ ಮಳೆಯಂತೆ ಕಂಡು ಬಂದಿತ್ತು. ಕೆಆರ್ ಮಾರ್ಕೆಟ್ ಫ್ಲೈ ಓವರ್ ಮೇಲೆ ಬಂದ ಅರುಣ್ ಎಂಬ ವ್ಯಕ್ತಿ 10 ರೂ. ಮುಖಬೆಲೆಯ ಸುಮಾರು ಮೂರ್ನಾಲ್ಕು ಸಾವಿರದಷ್ಟು ನೋಟುಗಳನ್ನು ಗಾಳಿಯಲ್ಲಿ ಎಸೆದು ಓಡಿ ಹೋಗಿದ್ದನು. ಆಗ ಏಕೆ ಹಣ ಎಸೆದನು ಎಂಬ ಬಗ್ಗೆ ಸ್ಪಷ್ಟವಾದ ಮಾಹಿತಿ ಸಿಕ್ಕಿರಲಿಲ್ಲ. ಸದ್ಯ ಆತನನ್ನು ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.
ನೋಟುಗಳನ್ನು ಆಯ್ದುಕೊಂಡ ಜನ: ಫ್ಲೈ ಓವರ್ ಮೇಲಿಂದ ಹಣ ಬೀಳುತ್ತಿದ್ದಂತೆ ಜನರು ಮೊದಲು ಅಚ್ಚರಿಗೊಂಡರು. ನೋಟುಗಳು ಮೇಲಿಂದ ಬೀಳುತ್ತಿದ್ದಂತೆ ಹಣವನ್ನು ಆಯ್ದುಕೊಳ್ಳಲು ಮುಂದಾದರು. ಈ ವೇಳೆ ಫ್ಲೈಓವರ್ ಕೆಳಗೆ ಕೆಲಕಾಲ ಸಂಚಾರ ದಟ್ಟಣೆ ಉಂಟಾಯಿತು. ನೋಟು ಎಸೆಯುವುದನ್ನು ನೋಡಿದ ಕೆಲವರು, ಫ್ಲೈ ಓವರ್ ಮೇಲೂ ಬಂದು ನೋಟುಗಳನ್ನು ಆಯ್ದುಕೊಂಡರು.
ಕಪ್ಪು ಕೋಟಿನಲ್ಲಿ ಬಂದು ಹಣ ಎಸೆದ ವ್ಯಕ್ತಿ ಯಾರು?: ಬಿಳಿ ಅಂಗಿ, ಕಪ್ಪು ಕೋಟು ಮತ್ತು ಶೂ ಧರಿಸಿದ್ದ ವ್ಯಕ್ತಿಯೊಬ್ಬರು ಕೈಯಲ್ಲಿ ಚಿಕ್ಕ ಬ್ಯಾಗ್ ಹಿಡಿದುಕೊಂಡು ಫ್ಲೈ ಓವರ್ ಮೇಲೆ ಬಂದಿದ್ದರು. ಬಳಿಕ ಫ್ಲೈ ಓವರ್ ಮೇಲೆ ನಿಂತು ಬ್ಯಾಗ್ನಲ್ಲಿದ್ದ ನೋಟುಗಳನ್ನು ಏಕಾಏಕಿ ಗಾಳಿಯಲ್ಲಿ ತೂರಲು ಆರಂಭಿಸಿದರು. ನೋಟುಗಳು ಫ್ಲೈ ಓವರ್ ಕೆಳಗೆ ಬೀಳುತ್ತಿದ್ದಂತೆ ಜನರು ಅವುಗಳನ್ನು ತೆಗೆದುಕೊಳ್ಳಲು ಮುಗಿಬಿದ್ದರು. ಪರಿಣಾಮ ಕೆಲಕಾಲ ಆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಬ್ಯಾಗ್ನಲ್ಲಿದ್ದ ಹಣ ಖಾಲಿ ಆಗುತ್ತಿದ್ದಂತೆ ಆ ವ್ಯಕ್ತಿ ಸ್ಥಳದಿಂದ ಕಾಲ್ಕಿತ್ತಿದ್ದ. ಆ ವ್ಯಕ್ತಿ ಯಾರು?.. ಹಣ ಎಸೆಯಲು ಏನು ಕಾರಣ.. ಎಂಬ ಮಾಹಿತಿ ಮೊದಲು ಪೊಲೀಸರಿಗೆ ಸಿಕಿರಲಿಲ್ಲ. ಆದರೆ, ಹಣ ಸಿಕ್ಕವರು ಮಾತ್ರ ಅಚ್ಚರಿ ಜೊತೆ ಖುಷಿಯಿಂದ ತೆರಳಿದರು.
ಫೇಮಸ್ ಆಗಲು ಕಂತೆ-ಕಂತೆ ನೋಟು ಎಸೆದ ಯೂಟ್ಯೂಬರ್: ಪ್ರಕರಣ ಸಂಬಂಧ ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ಬಿ ನಿಂಬರಗಿ ಮಾತನಾಡಿ, ಫ್ಲೈಓವರ್ ಮೇಲೆ ನಿಂತ ವ್ಯಕ್ತಿ ಹಣ ಚೆಲ್ಲುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿತ್ತು. ಅಲ್ಲದೆ ಸಂಚಾರ ವ್ಯವಸ್ಥೆಯಲ್ಲಿ ಅಡಚಣೆಯಾಗಿತ್ತು. ಈ ಸಂಬಂಧ ಸುಮೋಟೋ ಕೇಸ್ ದಾಖಲಿಸಿ ಆ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಈ ಘಟನೆ ಕುರಿತು ತನಿಖೆ ಆರಂಭಿಸಿದಾಗ ಆರೋಪಿ ನಾಗರಭಾವಿ ನಿವಾಸಿ ಅರುಣ್ ಎಂಬುದು ತಿಳಿದುಬಂದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಯು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾನೆ ಎಂಬುದು ಗೊತ್ತಾಗಿದೆ. ಮಾರ್ಕೆಟಿಂಗ್ ಮತ್ತು ಆ್ಯಂಕರ್ ಕೆಲಸ ಮಾಡುತ್ತಿದ್ದ ಆರೋಪಿ ಅರುಣ್ ಕೆಲಸ ಮಾಡಿ ಬಂದಿದ್ದ ಹಣವನ್ನು ಸಂಗ್ರಹಿಸಿದ್ದನು. ಹತ್ತು, ನೂರು, ಎರಡು ನೂರು ನೋಟುಗಳಿದ್ದ ಬ್ಯಾಗ್ ಜೊತೆ ಅರುಣ್ ತನ್ನ ಸ್ನೇಹಿತನೊಂದಿಗೆ ಕೆಆರ್ ಮಾರ್ಕೆಟ್ ಸೇತುವೆ ತಲುಪಿದ್ದಾನೆ. ಬಳಿಕ ಬ್ಯಾಗ್ನಲ್ಲಿದ್ದ ಹಣವನ್ನು ಫ್ಲೈಓವರ್ ಮೇಲೆ ನಿಂತು ಎಸೆದಿದ್ದಾನೆ. ಬಳಿಕ ಈ ವಿಡಿಯೋವನ್ನು ತಾನೇ ರೆಕಾರ್ಡ್ ಮಾಡಿ ವಾಟ್ಸಾಪ್, ಇನ್ಸ್ಟಾಗ್ರಾ, ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದಾನೆ. ಹುಚ್ಚು ಪ್ರಚಾರದ ಗೀಳಿಗಾಗಿ ಮಾಡಿದ್ದಾನೆ. ಕೆಆರ್ ಮಾರ್ಕೆಟ್ ಪೊಲೀಸರು ಆತನ ವಿರುದ್ಧ ಕ್ರಮ ಮುಂದುವರಿಸಿದ್ದಾರೆ ಎಂದು ಡಿಸಿಪಿ ನಿಂಬರಗಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಹಿಳೆಯ ತಲೆ ಮೇಲೆ ಹರಿದ ಬಸ್: ಯಶವಂತಪುರ ಬಳಿ ಭೀಕರ ಅಪಘಾತ