ಬೆಂಗಳೂರು: ಪ್ರೇಯಸಿ ಬೇರೊಬ್ಬನ ಜೊತೆ ಸ್ನೇಹ ಬೆಳಸಿದ್ದಕ್ಕೆ ಕೋಪಗೊಂಡ ಪ್ರಿಯಕರ ಆಕೆಯ ಕೊಲೆ ಮಾಡಿ ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ಮೇ. 30ರಂದು ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ಕಾಣೆಯಾಗಿರುವ ಕುರಿತು ಪ್ರಕರಣ ದಾಖಲಾಗಿತ್ತು. ಪ್ರಕರಣದ ಜಾಡು ಹಿಡಿದು ಬೆನ್ನತ್ತಿದ್ದ ಪೊಲೀಸರು ತನಿಖೆ ಚುರುಕುಗೊಳಿಸಿದ್ದರು. ಆದರೆ, ನಿನ್ನೆ ಏಕಾಏಕಿ ಪ್ರಕಾಶ್ ಎಂಬ ವ್ಯಕ್ತಿ ಠಾಣೆಗೆ ಬಂದು ನಾನೇ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದಾನೆ.
![bangalore](https://etvbharatimages.akamaized.net/etvbharat/prod-images/3537667_bangalo.jpg)
ಘಟನೆಯ ವಿವರ:
ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಮೇರಿ ಎಂಬ ಮಹಿಳೆ ವಾಸವಾಗಿದ್ದರು. ಗಂಡನನ್ನು ಕಳೆದುಕೊಂಡು ಸುಮಾರು 15 ವರ್ಷಗಳಿಂದ ಒಬ್ಬಂಟಿಯಾಗಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಈ ವೇಳೆ ನಮ್ಮಿಬ್ಬರಿಗೂ ಪರಿಚಯವಾಗಿತ್ತು.
ಪರಿಚಯ ಪ್ರೀತಿಗೆ ತಿರುಗಿ ಇಬ್ಬರೂ ಸಂಬಂಧವನ್ನು ಹೊಂದಿದ್ವಿ. ಆದರೆ ಮೇರಿ ಬೇರೊಬ್ಬರ ಸ್ನೇಹ ಬೆಳಸಿದ್ದಳು. ಇದನ್ನು ಸಹಿಸದೇ ನಾನೇ ಮೇ.31ರಂದು ಬಾಣಸಾವಡಿ ಬಳಿ ಇರುವ ಪಾಳು ಮನೆಗೆ ಕರೆದುಕೊಂಡು ಹೋಗಿ ಡ್ರಿಂಕ್ಸ್ ಮಾಡಿಸಿ ಕೊಲೆ ಮಾಡಿದ್ದೆ ಎಂದು ಕೊಲೆ ವಿಚಾರ ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕಾಶ್ ಮೇಲೆ ಕೊಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.