ಬೆಂಗಳೂರು: ಎಟಿಎಂ ಮಷಿನ್ ಸರ್ವೀಸ್ ಮಾಡುವ ನೆಪದಲ್ಲಿ ಎಟಿಎಂನಿಂದ ಹಣ ಕದಿಯುತ್ತಿದ್ದ ಆರೋಪಿಯೋರ್ವನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿನಯ್ ಜೋಗಿ ಬಂಧಿತ ಆರೋಪಿಯಾಗಿದ್ದು, ಸೆಕ್ಯೂರ್ ವ್ಯಾಲ್ಯೂ ಕಂಪನಿಯಲ್ಲಿ ಎಂಟಿಎಂಗಳಿಗೆ ಹಣ ತುಂಬಿಸುವ ಕೆಲಸ ಮಾಡುತ್ತಿದ್ದನಂತೆ. ಹಲವು ವರ್ಷಗಳಿಂದ ಈ ಕೆಲಸ ಮಾಡುತ್ತಿದ್ದ ವಿನಯ್, ಆಗಸ್ಟ್ 24ರಂದು ಗೊಲ್ಲರಹಟ್ಟಿಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಮಷಿನ್ ಸರ್ವೀಸ್ ಮಾಡುವ ಸೋಗಿನಲ್ಲಿ 30 ಲಕ್ಷ ಹಣ ದೋಚಿ, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದ. ಇದರಿಂದ ಅನುಮಾನಗೊಂಡ ಕಂಪನಿ ವ್ಯವಸ್ಥಾಪಕರು, ಮರು ದಿನ ಇನ್ನೋರ್ವ ಸಿಬ್ಬಂದಿ ಮೂಲಕ ಪರಿಶೀಲಿಸಿದಾಗ ಹಣ ಕದ್ದಿರುವುದು ಬೆಳಕಿಗೆ ಬಂದಿತ್ತು.
ಈ ಸಂಬಂಧ ಕಂಪನಿಯ ಮ್ಯಾನೇಜರ್ ರವಿ, ಪೊಲೀಸರಿಗೆ ದೂರು ನೀಡಿದ್ದರು. ವಂಚನೆ ಪ್ರಕರಣ ದಾಖಲಿಸಿಕೊಂಡ ಬ್ಯಾಡರಹಳ್ಳಿ ಪೊಲೀಸರು, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಒಟ್ಟಾರೆ ವಿವಿಧ ಎಟಿಎಂಗಳಿಂದ 50 ಲಕ್ಷ ರೂಪಾಯಿಗಳನ್ನು ಕಳ್ಳತನ ಮಾಡಿರುವುದಾಗಿ ವಿನಯ್ ಜೋಗಿ ಒಪ್ಪಿಕೊಂಡಿದ್ದಾನೆ.
ಇನ್ನು ಕದ್ದಿರುವ ಹಣದಲ್ಲಿ 14.50 ಲಕ್ಷ ತಂದೆ-ತಾಯಿಗೆ ನೀಡಿರುವುದಾಗಿಯೂ ಹಾಗೂ 11 ಲಕ್ಷ ರೂ.ಗಳನ್ನು ಸಾಲಗಾರರಿಗೆ ನೀಡಿರುವುದಾಗಿಯೂ ಪೊಲೀಸರ ಮುಂದೆ ಹೇಳಿಕೊಂಡಿದ್ದಾನೆ. ಇನ್ನುಳಿದ ಹಣವನ್ನು ಜಪ್ತಿ ಮಾಡಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.