ಬೆಂಗಳೂರು: ಪತ್ನಿಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದವನನ್ನು ಕೊಲೆ ಮಾಡಿದ ಆರೋಪದಡಿ ಜೈಲು ಸೇರಿದ್ದ ವ್ಯಕ್ತಿಗೆ ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಪ್ರಕರಣದಲ್ಲಿ ಜಾಮೀನು ನೀಡುವಂತೆ ಕೋರಿ ಮಂಡ್ಯದ ಶ್ರೀರಂಗಪಟ್ಟಣ ತಾಲೂಕಿನ ಆರೋಪಿಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ. ನಟರಾಜನ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ಮಾಡಿದೆ.
ಆರೋಪಿ ವಿರುದ್ಧ ಸಾಂದರ್ಭಿಕ ಸಾಕ್ಷ್ಯಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಕ್ಷಿಯಿಲ್ಲ. ಘಟನೆಯನ್ನು ಪ್ರತ್ಯಕ್ಷವಾಗಿ ನೋಡಿದ ಸಾಕ್ಷಿಗಳೂ ಇಲ್ಲ. ಮುಖ್ಯವಾಗಿ ಮೃತ ವ್ಯಕ್ತಿ ಯಾರೆಂಬುದು ನಿಖರವಾಗಿ ಪತ್ತೆಯಾಗಿಲ್ಲ. ಮೃತನ ಪತ್ನಿ ಎನ್ನಲಾಗಿರುವ ಮಹಿಳೆ ನೀಡಿರುವ ಹೇಳಿಕೆ ಮೇರೆಗೆ ವ್ಯಕ್ತಿ ಯಾರೆಂದು ಅಂದಾಜಿಸಲಾಗಿದೆ.
ಆತನೇ ಮೃತ ವ್ಯಕ್ತಿ ಎಂಬುದನ್ನು ಖಚಿತಪಡಿಸಿಕೊಳ್ಳಲು ಆತನ ಮಗನ ಡಿಎನ್ಎ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಲಾಗಿದೆ. ಆದರೆ, ವರದಿ ಇನ್ನೂ ಲಭ್ಯವಾಗಿಲ್ಲ. ಇದರ ನಡುವೆ ಮಹಿಳೆ ನೀಡಿರುವ ಹೇಳಿಕೆ ಹಾಗೂ ಸಾಂದರ್ಭಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿತನನ್ನು ಬಂಧಿಸಲಾಗಿದೆ.
ಕಳೆದ ಎಂಟು ತಿಂಗಳಿಂದ ಆರೋಪಿ ನ್ಯಾಯಾಂಗ ಬಂಧನಲ್ಲಿದ್ದಾನೆ. ಪ್ರಕರಣದಲ್ಲಿ 2ನೇ ಆರೋಪಿಗೆ ಹೈಕೋರ್ಟ್ನ ಮತ್ತೊಂದು ಪೀಠ ಜಾಮೀನು ನೀಡಿದೆ. ಹೀಗಾಗಿ ಆರೋಪಿಗೂ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟು ಕುಮಾರ್ಗೆ ಷರತ್ತುಬದ್ಧ ಜಾಮೀನು ನೀಡಿದೆ.
ಆರೋಪಿ ಒಂದು ಲಕ್ಷ ಮೊತ್ತದ ವೈಯಕ್ತಿಕ ಬಾಂಡ್ ನೀಡಬೇಕು. ಅಷ್ಟೇ ಮೊತ್ತಕ್ಕೆ ಇಬ್ಬರು ವ್ಯಕ್ತಿಗಳ ಭದ್ರತಾ ಖಾತರಿ ನೀಡಬೇಕು. ಸಾಕ್ಷ್ಯ ನಾಶಪಡಿಸಬಾರದು, ಇಂತಹುದೇ ಪ್ರಕರಣಗಳಲ್ಲಿ ಭಾಗಿಯಾಗಬಾರದು. ವಿಚಾರಣೆಗೆ ವಿಳಂಬ ಮಾಡಬಾರದು. ಅದೇ ರೀತಿ ಹೈಕೋರ್ಟ್, ವಿಚಾರಣಾ ನ್ಯಾಯಾಲಯ ಮತ್ತು ಪೊಲೀಸರ ಅನುಮತಿ ಇಲ್ಲದೇ ವ್ಯಾಪ್ತಿ ಬಿಟ್ಟು ಹೊರ ಹೋಗಬಾರದು. ಇವುಗಳಲ್ಲಿ ಯಾವುದೇ ಷರತ್ತು ಮೀರಿದರೂ ಪ್ರಾಸಿಕ್ಯೂಷನ್ ಜಾಮೀನು ರದ್ದಿಗೆ ಕೋರಬಹುದು ಎಂದು ಪೀಠ ಷರತ್ತು ವಿಧಿಸಿದೆ.
ಪ್ರಕರಣದ ಹಿನ್ನೆಲೆ
2020ರ ಸೆಪ್ಟೆಂಬರ್ 17ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಬಳಿಯ ಗ್ರಾಮವೊಂದ ತೋಟದಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತ ದೇಹ ಪತ್ತೆಯಾಗಿತ್ತು. ಈ ಸಂಬಂಧ ತೋಟ ನೋಡಿಕೊಳ್ಳುವ ವ್ಯಕ್ತಿ ನೀಡಿದ ಮಾಹಿತಿ ಹಾಗೂ ಘಟನಾ ಸ್ಥಳದಲ್ಲಿ ಕಂಡು ಬಂದ ದೃಶ್ಯಗಳ ಆಧಾರದಲ್ಲಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಆ ಬಳಿಕ ಮೃತ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಪ್ರಯತ್ನಿಸಿದ್ದರೂ ಗುರುತು ಸಿಕ್ಕಿರಲಿಲ್ಲ. ಹೀಗಾಗಿ, ಸೆಪ್ಟೆಂಬರ್ 29ರಂದು ವ್ಯಕ್ತಿಯ ಮರಣೋತ್ತರ ಪರೀಕ್ಷೆ ನಡೆಸಿ ಅಂತಿಮ ಸಂಸ್ಕಾರವನ್ನೂ ನೆರವೇರಿಸಿದ್ದರು.
ಮರುದಿನ ಸೆಪ್ಟೆಂಬರ್ 30ರಂದು ಮಹಿಳೆಯೊಬ್ಬರು ಕೆ.ಆರ್ ಸಾಗರ ಪೊಲೀಸ್ ಠಾಣೆಗೆ ತೆರಳಿ ತನ್ನ ಪತಿ ಕಾಣೆಯಾಗಿರುವುದಾಗಿ ದೂರು ನೀಡಿದ್ದರು. ಹಾಗೆಯೇ, ಪೊಲೀಸರು ತೋರಿಸಿದ ಫೋಟೋದಲ್ಲಿದ್ದ ಮೃತ ವ್ಯಕ್ತಿಯನ್ನು ಬಟ್ಟೆ ಆಧಾರದಲ್ಲಿ ಗುರುತಿಸಿ, ಆತ ತನ್ನ ಪತಿ ಎಂದಿದ್ದರು. ಈ ಹಿನ್ನೆಲೆಯಲ್ಲಿ ಮೃತ ವ್ಯಕ್ತಿ ಮಹಿಳೆಯ ಪತಿ ಹೌದೋ, ಅಲ್ಲವೋ ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರು ಮಹಿಳೆಯ ಮಗನ ಡಿಎನ್ಎ ಪರೀಕ್ಷೆಗೆ ಸ್ಯಾಂಪಲ್ ಕಳುಹಿಸಿದ್ದಾರೆ.
ಇನ್ನು, ವಿಚಾರಣೆ ವೇಳೆ ಆ ಮಹಿಳೆಯು ತನ್ನ ಗಂಡನಿಗೂ ಆರೋಪಿಗೂ ಪತ್ನಿಗೂ ಅಕ್ರಮ ಸಂಬಂಧವಿತ್ತು. ಆಕೆಯನ್ನು ಹದ್ದುಬಸ್ತಿನಲ್ಲಿಡಲು ಆರೋಪಿಗೆ ಹೇಳಿದ್ದೆ. ಹೀಗಾಗಿ ತನ್ನ ಪತಿಯನ್ನು ಆರೋಪಿತ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದರು.
ಕೊಲೆ ಹಿಂದಿನ ದಿನ ಆರೋಪಿಯ ಸ್ನೇಹಿತ ಮೃತ ವ್ಯಕ್ತಿಯ ಜತೆಗೆ ಹೋಗುತ್ತಿದ್ದನ್ನು ನೋಡಿದ್ದಾಗಿ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮರುದಿನ ಬೆಳಗ್ಗೆ ಅಪರಿಚಿತ ಮೃತ ದೇಹ ಪತ್ತೆಯಾಗಿದೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮೃತ ವ್ಯಕ್ತಿಗೆ ಮದ್ಯಪಾನ ಮಾಡಿಸಿರುವ ಹಾಗೂ ಬಿಯರ್ ಬಾಟಲಿಯಿಂದ ತಲೆಗೆ ಬಡಿದಿರುವ ಕುರಿತು ಉಲ್ಲೇಖಿಸಲಾಗಿದೆ. ಈ ಎಲ್ಲ ಸಾಂದರ್ಭಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿ ಹಾಗೂ ಆತನ ಸ್ನೇಹಿತ ಇಬ್ಬರೂ ಸೇರಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿದ್ದರು.
ಇದನ್ನು ಓದಿ:ವರದಕ್ಷಿಣೆ ಕಿರುಕುಳ: ನೇಣಿಗೆ ಶರಣಾದ ನವ ವಿವಾಹಿತೆ