ಬೆಂಗಳೂರು: ನಗರದಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕಟ್ಟಡದ ಮೇಲಿಂದ ಬಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 25ನೇ ಮಹಡಿಯಿಂದ ಬಿದ್ದು ಓರ್ವ ವ್ಯಕ್ತಿ ಸಾವನ್ನಪ್ಪಿದರೆ, ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಮಹಿಳೆ ಮೃತಪಟ್ಟಿರುವ ಘಟನೆ ಗುರುವಾರ ತಡರಾತ್ರಿ ನಡೆದಿದೆ.
ಕುಡಿಯಬೇಡ ಎಂದು ಬುದ್ದಿಹೇಳಿದ್ದಕ್ಕೆ ಕೋಪಗೊಂಡು ಉತ್ತರ ಪ್ರದೇಶದ ಅಯೋಧ್ಯ ಮೂಲದ ಪ್ರಶಾಂತ್ ಸಿಂಗ್ (27) ಎಂಬಾತ ಅಪಾರ್ಟ್ಮೆಂಟ್ 25ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾನೆ. ಕೋಣನಕುಂಟೆ ಕ್ರಾಸ್ ಪ್ರೆಸ್ಟೀಜ್ ಪಾರ್ಕ್ ಅಪಾರ್ಟ್ಮೆಂಟ್ನ 25ನೇ ಮಹಡಿಯಲ್ಲಿ ಪ್ರಶಾಂತ್ ಸಿಂಗ್ ಹಾಗೂ ಕುಟುಂಬ ವಾಸವಾಗಿತ್ತು. ಕಳೆದ ಆರು ತಿಂಗಳ ಹಿಂದೆ ವಿವಾಹವಾಗಿದ್ದ. ಪತ್ನಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದರು. ಖಾಸಗಿ ಕಂಪೆನಿಯೊಂದರಲ್ಲಿ ಸೇಲ್ಸ್‌ಮನ್ ಆಗಿ ಇವರು ಕೆಲಸ ಮಾಡಿಕೊಂಡಿದ್ದರು.
ವಿಪರೀತ ಕುಡಿತದ ಚಟ ಅಂಟಿಸಿಕೊಂಡಿದ್ದ ವಿಚಾರಕ್ಕಾಗಿ ಆಗಾಗ ಮನೆಯವರೊಂದಿಗೆ ವಾಗ್ವಾದ ನಡೆಯುತಿತ್ತು. ಹಲವು ಬಾರಿ ಬುದ್ದಿ ಹೇಳಿದ್ದರೂ ನಿನ್ನೆ ತಡರಾತ್ರಿ ಮದ್ಯಸೇವಿಸಿ ಮನೆಗೆ ಬಂದಿದ್ದ. ಇದರಿಂದ ಅಸಮಾಧಾನಗೊಂಡಿದ್ದ ಕುಟುಂಬಸ್ಥರು ಪ್ರಶಾಂತ್ಗೆ ಬೈದು ಬುದ್ದಿ ಹೇಳಿದ್ದರು. ಜಗಳ ಮುಗಿದ ಮೇಲೆ ಮಲಗಲು ಹೋದಾಗ ಬೆಡ್ ರೂಮ್ ಬಾಲ್ಕನಿಯ 25ನೇ ಅಂತಸ್ತಿನಿಂದ ಕೆಳಬಿದ್ದು ಸಾವನ್ನಪ್ಪಿದ್ದಾನೆ. ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ಆಯತಪ್ಪಿ ಬಿದ್ದು ಮಹಿಳೆ ಸಾವು: ಯಲಹಂಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದ ಮನೆಯೊಂದರ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದು ಮಹಿಳೆ ಸಾವನ್ನಪ್ಪಿದ್ದಾರೆ. ಪ್ರೇಮಾ (44) ಸಾವನ್ನಪ್ಪಿದವರು. ಯಲಹಂಕದ ಗಾಂಧಿನಗರದಲ್ಲಿ ಕಳೆದ ಎರಡು ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಖಾಸಗಿ ಶಾಲೆಯೊಂದರಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ಕಳೆದ ಹತ್ತು ವರ್ಷಗಳಿಂದ ಗಂಡನಿಂದ ದೂರವಾಗಿದ್ದರು. ನಿನ್ನೆ ರಾತ್ರಿ ಮನೆಯ ಎರಡನೇ ಮಹಡಿ ಮುಂಭಾಗ ಅಳವಡಿಸಿದ್ದ ಗ್ರಿಲ್ ಬಳಿ ಆಯತಪ್ಪಿ ಬಿದ್ದಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಪ್ರಯಾಣಿಕರ ಬ್ಯಾಗ್ನಿಂದ 1.65 ಲಕ್ಷ ದೋಚಿದ್ದ ಆಟೋ ಚಾಲಕನ ಬಂಧನ