ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಹುದ್ದೆ ಕೊಡಿಸುವುದಾಗಿ ನಂಬಿಸಿ ಕೋಟಿಗಟ್ಟಲೇ ಹಣ ಪಡೆದ ಭೂಪನನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿ ಸುಮಾರು 1.67 ಕೋಟಿ ವಂಚಿಸಿರುವುದು ಬೆಳಕಿಗೆ ಬಂದಿದೆ. ದಾವಣಗೆರೆ ನಿವಾಸಿ ಹೆಚ್.ಬಿ.ಜಯದೇವ ನೀಡಿದ ದೂರಿನ ಮೇರೆಗೆ ಆರೋಪಿ ಅರುಣ್ ಕುಮಾರ್ನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಧಾನಸೌಧ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.
ನಡೆದಿದ್ದೇನು?: ಜಯದೇವ ಸ್ನೇಹಿತರಾದ ಲಕ್ಕಪ್ಪ ಚಂದ್ರಗಿರಿ, ಚಂದ್ರಪ್ಪ ಎಂಬುವರು ಅಬಕಾರಿ ಇಲಾಖೆಯ ಸಬ್ ಇನ್‌ಸ್ಪೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಸ್ನೇಹಿತರಾದ ಜಯದೇವ ಎಂಬಾತನಿಗೆ ಕುಂದೂರಿನ ಜ್ಞಾನಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾಗಿರುವ ಆರೋಪಿ ಅರುಣ್ ಕುಮಾರ್ನ ಪರಿಚಯವಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯನಾಗಿದ್ದು, ನನಗೆ ಎಲ್ಲಾ ರೀತಿಯ ಲಿಂಕ್ ಇದೆ. ನಿಮಗೆ ಹಾಗೂ ಸ್ನೇಹಿತರಿಗೆ ಸಬ್ ಇನ್‌ಸ್ಪೆಕ್ಟರ್ ಕೆಲಸ ಕೊಡಿಸುತ್ತೇನೆ. ಇದಕ್ಕೆ 70 ಲಕ್ಷ ಹಣ ಖರ್ಚಾಗಲಿದೆ ಎಂದು ಹೇಳಿದ್ದಾನೆ. ಇದಕ್ಕೆ ಜಯದೇವ ಹಾಗೂ ಸ್ನೇಹಿತರು ಒಪ್ಪಿಕೊಂಡಿದ್ದು, ಮೊದಲ ಹಂತವಾಗಿ 15 ಲಕ್ಷ, ಬಳಿಕ 20 ಲಕ್ಷ ರೂಪಾಯಿ ಹಣ ನೀಡಿದ್ದಾರೆ.
8 ರಿಂದ 10 ಜನರಿಗೆ ಕೆಲಸ ಸಿಗುವ ಆಸೆಯಿಂದ 1.32 ಕೋಟಿ ರೂಪಾಯಿ ಹಣವನ್ನು ಆರೋಪಿಗೆ ವರ್ಗಾವಣೆ ಮಾಡಿದ್ದಾರೆ. ಎಂ.ಎಸ್. ಬಿಲ್ಡಿಂಗ್ ಪಾರ್ಕಿಂಗ್ ಪ್ರದೇಶ ಬಳಿ ಕರೆಯಿಸಿಕೊಂಡ ಆರೋಪಿ ಅರುಣ್ ಕುಮಾರ್ ಕೆಪಿಎಸ್ಸಿ ಎಲ್ಲಾ ಸದಸ್ಯರಿಗೆ ಇಲ್ಲಿಂದಲೇ ಕೆಲಸ ಮಾಡಿಸಿಕೊಡುತ್ತೇನೆ. ನಿಮಗೆ ಸರ್ಕಾರಿ ಆದೇಶ ಪ್ರತಿಯನ್ನು ಇನ್ನೊಂದು ತಿಂಗಳಲ್ಲಿ ಕಳುಹಿಸುತ್ತೇನೆ ಭರವಸೆ ನೀಡಿದ್ದನು.
ತಿಂಗಳಾದರೂ ಆದೇಶ ಪ್ರತಿ ಬಾರದ ಹಿನ್ನೆಲೆ ಕರೆ ಮಾಡಿದಾಗ ಮತ್ತೆ ಕರೆಯಿಸಿಕೊಂಡು 10 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದ. ಇದರಿಂದ ಅನುಮಾನಗೊಂಡು ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾರ್ಯ ಪ್ರವೃತ್ತಗೊಂಡ ಪೊಲೀಸರು ವಂಚಕನನ್ನು ಬಂಧಿಸಿ ಕೃತ್ಯ ನಡೆದ ಸ್ಥಳದ ಮೇರೆಗೆ ಆರೋಪಿಯನ್ನು ವಿಧಾನಸೌಧ ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯ ವಿಚಾರಣೆ ಕೈಗೊಂಡಿದ್ದಾರೆ.