ಹೊಸಕೋಟೆ: ಚಲಿಸುತ್ತಿದ್ದ ಬೈಕ್ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಬಳಿ ನಡೆದಿದೆ.
ಲಾರಿ ಡಿಕ್ಕಿಯ ರಭಸಕ್ಕೆ ಸ್ಥಳದಲ್ಲೆ ಬೈಕ್ನಲ್ಲಿದ್ದ ಮೂವರು ಸಾವನ್ನಪಿದ್ದಾರೆ. ಮೃತರು ಹೊಸಕೋಟೆ ತಾಲೂಕಿನ ಗೊಣಕನಹಳ್ಳಿ ಗ್ರಾಮದ ಮನೋಹರ್ ( 19 ) ಶ್ವೇತಾ (38 ) ಮತ್ತು ಸುಕೃತಾ (4) ಮೃತ ಎಂದು ಗುರುತಿಸಲಾಗಿದೆ. ಡಿಕ್ಕಿಯ ನಂತರ ಬೈಕ್ ಸಮೇತ ಲಾರಿ ಹಳ್ಳಕ್ಕೆ ಬಿದ್ದಿದೆ.
ಘಟನೆಗೆ ಲಾರಿ ಚಾಲಕನ ಅಜಾಗರೂಕತೆಯೇ ಕಾರಣ ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನ ಹೊಸಕೋಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಹೊಸಕೋಟೆ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದೇವೆ: ''ಘಟನೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ, ಇವತ್ತು ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯ ಬಳಿ ಹತ್ತಿರ ಒಂದು ಅಪಘಾತವಾಗಿ ಮೂರು ಜನರು ಮೃತಪಟ್ಟಿದ್ದಾರೆ. ರಸ್ತೆಯ ಹಂಪ್ ದಾಟುತ್ತಿದ್ದ ಬೈಕ್ಗೆ ಹಿಂದಿನಿಂದ ಲಾರಿಯೊಂದು ಬಂದು ಡಿಕ್ಕಿಹೊಡೆದಿದ್ದರಿಂದ ಅಪಘಾತ ನಡೆದಿದೆ ಎಂಬುದು ತಿಳಿದುಬಂದಿದೆ. ಈಗಾಗಲೇ ಘಟನೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದೇವೆ. ಮೃತರು ಆಸ್ಪತ್ರೆಗೆ ಹೋಗುತ್ತಿದ್ದರು. ಈ ವೇಳೆ ಘಟನೆ ಜರುಗಿದೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಲಾರಿ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದೇವೆ. ಯಾವ ಕಾರಣಕ್ಕೆ ಅಪಘಾತವಾಗಿದೆ ಎಂಬುದರ ಬಗ್ಗೆ ನಾವು ತನಿಖೆಯನ್ನು ಮಾಡುತ್ತೇವೆ. ಮೃತಪಟ್ಟವರಲ್ಲಿ ಒಬ್ಬನ ಹೆಸರು ಮನೋಹರ್ ಎಂದು. ಇವನು ಗಾಡಿಯನ್ನು ಓಡಿಸುತ್ತಿದ್ದ. ಇನ್ನೊಬ್ಬರ ಶ್ವೇತಾ ಎಂದು. ಮತ್ತೊಂದು ಮಗು ಸುಕೃತಾ ಎಂಬುದು ತಿಳಿದುಬಂದಿದೆ. ಇದಕ್ಕೆ ಸಂಬಂಧಪಟ್ಟಂತೆ ನಾವು ತನಿಖೆ ಮಾಡುತ್ತೇವೆ'' ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ತಿಳಿಸಿದ್ದಾರೆ.
ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ಕೂಡಾ ಕೈಗೊಂಡಿಲ್ಲ: ''ಹೊಸಕೋಟೆ ಆಸ್ಪತ್ರೆಗೆ ತಾಯಿ, ಮಗು ಹಾಗೂ ಮನೋಹರ್ ಎಂಬುವವರು ಹೋಗುತ್ತಿದ್ದರು. ಈ ವೇಳೆ ಆಂಧ್ರಪ್ರದೇಶದ ರಿಜಿಸ್ಟ್ರೇಷನ್ನ ಲಾರಿ ಬಂದು ಗುದ್ದಿದೆ. ಕಳೆದ ಹತ್ತು ವರ್ಷದಲ್ಲಿ ಇದೇ ಜಾಗದಲ್ಲಿ ಸುಮಾರು ಮೂರು ಅಪಘಾತಗಳು ನಡೆದಿವೆ. ಆದರೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿಲ್ಲ. ಇಲ್ಲಿ ರಸ್ತೆಯ ಮೇಲೆ ಯಾವುದೇ ಸೂಚನಾ ಫಲಕವನ್ನು ಕೂಡಾ ಅಳವಡಿಸಿಲ್ಲ. ವೇಗ ನಿಯಂತ್ರಣಕ್ಕೆ ಯಾವುದೇ ಕ್ರಮವನ್ನು ಕೂಡಾ ಕೈಗೊಂಡಿಲ್ಲ. ರಸ್ತೆಯ ಮೇಲೆ ಬಿಳಿಪಟ್ಟೆಯನ್ನ ಕೂಡಾ ಹಾಕಿಲ್ಲ. ವಿಜಯಪುರದಿಂದ ಜಡಿಗೇನಹಳ್ಳಿಯವರೆಗೆ ಯಾವುದೇ ಸೂಚನಾ ಫಲಕವನ್ನೂ ನೀಡಿಲ್ಲ. ಮೂರು ಜನ ಅಪಘಾತದಲ್ಲಿ ಮೃತಪಟ್ಟಿದ್ದಾರೆ'' ಎಂದು ಮೃತರ ಸಂಬಂಧಿ ಮಧು ಕುಮಾರ್ ಎಂಬುವವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಮಂಡ್ಯ: ಟ್ರ್ಯಾಕ್ಟರ್-ಬೈಕ್ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರು ಯುವಕರು ಸಾವು