ಬೆಂಗಳೂರು : ಕೌಟುಂಬಿಕ ಕಲಹ ಹಿನ್ನೆಲೆ ಮನೆಯಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಗೃಹಿಣಿ ಶವ ಪತ್ತೆಯಾಗಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಾಂಡವಪುರ ಮೂಲದ ನಿತ್ಯಶ್ರೀ ಮೃತ ಗೃಹಿಣಿ. ಬಿಎಸ್ಸಿ ವ್ಯಾಸಂಗ ಮಾಡಿದ್ದ ನಿತ್ಯಶ್ರೀ 2019ರಲ್ಲಿ ರಾಜೇಶ್‌ನೊಂದಿಗೆ ಪೋಷಕರು ಮದುವೆ ಮಾಡಿಕೊಟ್ಟಿದ್ದರು.
ದಂಪತಿಗೆ ಮುದ್ದಾದ ಒಂದು ವರ್ಷದ ಹೆಣ್ಣು ಮಗುವಿದೆ. ವೃತ್ತಿಯಲ್ಲಿ ರಾಜೇಶ್ ಲೀಗಲ್ ಅಡ್ವೈಸರ್ ಆಗಿದ್ದರೆ, ಮೃತ ಮಹಿಳೆ ಗೃಹಿಣಿಯಾಗಿದ್ದಳು. ಅತ್ತೆ-ಮಾವರೊಂದಿಗೆ ದ್ವಾರಕನಗರದ ಕೃಷ್ಣ ದೇವಸ್ಥಾನ ಬಳಿಯ ಮನೆಯೊಂದರಲ್ಲಿ ವಾಸವಿದ್ದರು. ಮದುವೆಯಾದ ಆರಂಭಿಕ ದಿನಗಳಲ್ಲಿ ಅನೋನ್ಯವಾಗಿದ್ದ ದಂಪತಿ ಕಾಲಕ್ರಮೇಣ ಇಬ್ಬರ ನಡುವೆ ವೈಮನಸ್ಸು ಮೂಡಿತ್ತು. ಕೌಟುಂಬಿಕ ಕಾರಣಕ್ಕಾಗಿ ದಂಪತಿ ನಡುವೆ ಜಗಳವಾಗುತ್ತಿತ್ತು ಎನ್ನಲಾಗುತ್ತಿದೆ.
ಈ ಸಂಬಂಧ ಮನೆಯಲ್ಲಿ ಯಾರೂ ಇಲ್ಲದಿರುವಾಗ ಇಂದು ಮಧ್ಯಾಹ್ನ ಫ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿ ಪಾಂಡವಪುರದಲ್ಲಿರುವ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಅಲ್ಲ, ಕೊಲೆ ಎಂದು ಕುಟುಂಬಸ್ಥರ ಆರೋಪ : ಘಟನೆ ಸಂಬಂಧ ಆತಂಕದಿಂದಲೇ ಮಹಿಳೆ ಪೋಷಕರು ಹಾಗೂ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಆಕ್ರೋಶದ ಜೊತೆಗೆ ದುಃಖ ವ್ಯಕ್ತಪಡಿಸಿದರು. ನಮ್ಮ ಮಗಳು ಆತ್ಮಹತ್ಯೆ ಮಾಡಿಕೊಂಡಿಲ್ಲ. ಆತ್ಮಹತ್ಯೆ ಮಾಡಿಕೊಳ್ಳುವ ಹುಡುಗಿಯೂ ಅಲ್ಲ. ಮದುವೆ ಆದಾಗಿನಿಂದಲೂ ಗಂಡನ ಮನೆಯವರು ಕಿರುಕುಳ ಕೊಡುತ್ತಿದ್ದರು. 20 ಲಕ್ಷ ಸಾಲ ಮಾಡಿ ಮಗಳ ಮದುವೆ ಮಾಡಲಾಗಿದೆ. ಎಲ್ಲರೂ ಸೇರಿ ನಮ್ಮ ಮಗಳಿಗೆ ಕಿರುಕುಳ ನೀಡಿದ್ದಾರೆ.
ಗಂಡ ರಾಜೇಶ್‌ಗೆ ಬೇರೆಯವರ ಜೊತೆ ಸಂಬಂಧವಿದೆ. ಅಲ್ಲದೆ ಒಂದು ವರ್ಷದ ಮಗುವಿಗೂ ತೊಂದರೆ ಕೊಡುತ್ತಿದ್ದರು. ಕುಟುಂಬಸ್ಥರು ಎಲ್ಲರೂ ಸೇರಿ ಕೊಲೆ ಮಾಡಿದ್ದಾರೆ ಎಂದು ಮಹಿಳೆ ಚಿಕ್ಕಮ್ಮ ಶೋಭಾ ಆರೋಪಿಸಿದ್ದಾರೆ.
ನ್ಯಾಯಕ್ಕಾಗಿ ಮನೆ ಮುಂದೆ ಪ್ರತಿಭಟನೆ : ಘಟನೆ ಸಂಬಂಧ ಮಹಿಳೆ ಪತಿ ರಾಜೇಶ್ ನಾಪತ್ತೆಯಾಗಿದ್ದಾರೆ. ಮಗಳ ಕೊಲೆ ಹಿಂದೆ ರಾಜೇಶ್ ಕೈವಾಡವಿದೆ. ಆತನನ್ನು ಬಂಧಿಸುವ ತನಕ ಶವವನ್ನು ಸ್ವೀಕರಿಸಲ್ಲ ಎಂದು ಆಗ್ರಹಿಸಿ ಮನೆಯ ಮುಂದೆ ಕುಳಿತು ಕುಟುಂಬಸ್ಥರು ಪ್ರತಿಭಟಿಸುತ್ತಿದ್ದಾರೆ.
ಮತ್ತೊಂದೆಡೆ ಮಗಳನ್ನು ಕಳೆದುಕೊಂಡ ಹೆತ್ತವರ ಗೋಳು ಹೇಳತೀರದಾಗಿದೆ. ಪೊಲೀಸರು ಮಧ್ಯ ಪ್ರವೇಶಿಸಿ ರಾಜೇಶ್‌ನನ್ನು ವಶಕ್ಕೆ ಪಡೆಯುವ ಭರವಸೆ ನೀಡಿದರೂ ಕೇಳದ ಕುಟುಂಬಸ್ಥರು ಶವದ ಮುಂದೆ ಪ್ರತಿಭಟಿಸುತ್ತಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.