ಬೆಂಗಳೂರು: ಕಾಂಗ್ರೆಸ್ ನಾಯಕರ ತಂಡ ನಗರದ ಕುಮಾರಕೃಪ ಅತಿಥಿ ಗೃಹದಿಂದ ಅಜ್ಞಾತ ಸ್ಥಳಕ್ಕೆ ತೆರಳಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಡಿಸಿಎಂ ಪರಮೇಶ್ವರ್, ದಿನೇಶ್ ಗುಂಡೂರಾವ್ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದರು.
ಪಕ್ಕದ ಕಾವೇರಿ ನಿವಾಸದಿಂದ ಸಿದ್ದರಾಮಯ್ಯ ಕೂಡ ತೆರಳಿದ ಹತ್ತೇ ನಿಮಿಷದಲ್ಲಿ ಕುಮಾರಕೃಪ ಅತಿಥಿ ಗೃಹದಲ್ಲಿ ಇದ್ದ ಕಾಂಗ್ರೆಸ್ ನಾಯಕರು ತೆರಳಿದ್ದಾರೆ. ಕೆ.ಸಿ.ವೇಣುಗೋಪಾಲ್ ಹಾಗೂ ದಿನೇಶ್ ಗುಂಡೂರಾವ್ ಕುಮಾರಕೃಪ ಅತಿಥಿ ಗೃಹದಲ್ಲಿ ಇದ್ದರೂ ವಾಹನವೇರಿ ಕೆಲಕಾಲ ಡಿಸಿಎಂ ಡಾ. ಜಿ.ಪರಮೇಶ್ವರ್ ಅವರಿಗಾಗಿ ಕಾದು ಅವರ ಆಗಮನದ ನಂತರ ಒಂದೇ ಕಾರಿನಲ್ಲಿ ಕುಳಿತು ತೆರಳಿದರು. ನಿಗದಿಯಂತೆ ಶಾಸಕರ ರಾಜೀನಾಮೆ ಸಂಬಂಧ ಕೈಗೊಳ್ಳಬಹುದಾದ ಕಾನೂನು ಕ್ರಮಗಳ ಕುರಿತು ಚರ್ಚಿಸಲು ಕುಮಾರಕೃಪ ಅತಿಥಿ ಗೃಹದಲ್ಲಿ ಸಭೆ ನಡೆಸಬೇಕಿತ್ತು.
ಆದರೆ ಕಡೆಯ ಕ್ಷಣದಲ್ಲಿ ಮನಸ್ಸು ಬದಲಿಸಿದ ಕೈ ನಾಯಕರು ಅಜ್ಞಾತ ಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ. ಕಾನೂನು ತಜ್ಞರ ತಂಡ ಕೂಡ ಇವರೊಂದಿಗೆ ತೆರಳಿದ್ದು, ಹೈಕೋರ್ಟ್ನ ಹಿರಿಯ ವಕೀಲರೊಬ್ಬರು ಇವರೊಂದಿಗೆ ತೆರಳಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಳವಡಿಕೆ ಕುರಿತು ಕಾಂಗ್ರೆಸ್ ನಾಯಕರು ಕಾನೂನು ತಜ್ಞರ ಜೊತೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಇದಾದ ಬಳಿಕ ನಾಳೆ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಜೊತೆಯೇ ತೆರಳಬೇಕಿದ್ದ ಗೃಹ ಸಚಿವ ಎಂ.ಬಿ.ಪಾಟೀಲ್ ತಡವಾಗಿ ಕಾವೇರಿಗೆ ಆಗಮಿಸಿದರು. ಆದರೆ ಪ್ರವೇಶ ದ್ವಾರದಲ್ಲಿಯೇ ಸಿದ್ದರಾಮಯ್ಯ ತೆರಳಿರುವ ಮಾಹಿತಿ ಪಡೆದು ತಮ್ಮ ಬೆಂಗಾವಲು ವಾಹನ ಅಲ್ಲೇ ಬಿಟ್ಟು ತಾವು ಆಗಮಿಸಿದ್ದ ಕಾರಿನಲ್ಲಿಯೇ ಸಿದ್ದರಾಮಯ್ಯ ತೆರಳಿದ್ದ ಮಾರ್ಗದತ್ತ ಪ್ರಯಾಣ ಬೆಳೆಸಿದ್ದಾರೆ.