ಬೆಂಗಳೂರು: ''ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ನುಡಿದಂತೆ ನಡೆಯದ ಸರ್ಕಾರ ಕವಲು ದಾರಿಯಲ್ಲಿದ್ದು, ಒಂದೇ ತಿಂಗಳಲ್ಲಿ ಅಪಖ್ಯಾತಿಗೆ ಒಳಗಾದ ಸರ್ಕಾರ ಇದಾಗಿದೆ'' ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ''ಪಂಚ ಗ್ಯಾರಂಟಿ ಜಾರಿಗೊಳಿಸುವಲ್ಲಿ ಗೊಂದಲ ಇದೆ. ಕೇಂದ್ರ ಸರ್ಕಾರ ಅಕ್ಕಿ ಕೊಡುತ್ತಿಲ್ಲ ಅಂತ ಆರೋಪ ಮಾಡಿದ್ದೀರಿ, ಎಫ್‌ಸಿಐ ಅಧಿಕಾರಿಗೆ ಒಂದು ರಾಜ್ಯಕ್ಕೆ ಅಕ್ಕಿ ಕೊಡುವ ಅಧಿಕಾರ ಇಲ್ಲ. ನೀವು ಕೇಂದ್ರ ಸರ್ಕಾರದ ಜೊತೆ ಮಾತಾಡಬೇಕಿತ್ತು. ಅಷ್ಟಕ್ಕೂ ಕೇಂದ್ರ ಸರ್ಕಾರ ನಿಮ್ಮ ಅನ್ನ ಭಾಗ್ಯಕ್ಕೆ ಅಕ್ಕಿ ಕೊಡ್ತೀವಿ ಅಂತ ಹೇಳಿತ್ತಾ? ಕೇಂದ್ರದ ಜೊತೆಗೆ ಇದರ ಬಗ್ಗೆ ಚರ್ಚೆ ಮಾಡಿದ್ದೀರಾ'' ಎಂದು ಪ್ರಶ್ನಿಸಿದರು.
''ಮಾನ್ಸೂನ್ ಕಾರಣದಿಂದ ಅಕ್ಕಿ ಅಲಭ್ಯತೆ ಇದೆ. ಹಾಗಾಗಿ ಕೇಂದ್ರ ಅಕ್ಕಿ ಕೊಡಕ್ಕಾಗಿಲ್ಲ. ಪಂಜಾಬ್ ಸರ್ಕಾರ ಅಕ್ಕಿ ಕೊಡಲು ತಯಾರಾಗಿದ್ದರು. ಆಂಧ್ರಪ್ರದೇಶ, ಛತ್ತೀಸ್‌ಗಡ ಸರ್ಕಾರಗಳು ಸಹಾಯ ಮಾಡಲು ಮುಂದಾಗಿದ್ದವು. ತೆಲಂಗಾಣ ಸರ್ಕಾರ ಭತ್ತ ಕೊಡಲು ಸಿದ್ದರಿದ್ದರು. ನಿಮಗೆ ಜನರಿಗೆ ಅಕ್ಕಿ ಕೊಡುವ ಇಚ್ಛಾಶಕ್ತಿ ಇಲ್ಲ. ಈಗ ದುಡ್ಡು ಕೊಡಲು ಮುಂದಾಗಿದ್ದೀರಾ, ಜನರು ಹಣ ತಿಂತಾರಾ ಅಂತ ಸಿಎಂ ಕೇಳಿದ್ದಾರೆ. ಸರ್ಕಾರ 5 ಕೆಜಿ ಅಕ್ಕಿ ಬದಲು 170 ರೂ. ನೀಡುವುದು ಒಬ್ಬ ಬಡ ಮಹಿಳೆಯ ಅರ್ಧ ದಿನದ ಕೂಲಿಗೆ ಸಮವಾಗಿದೆ'' ಎಂದು ಹೇಳಿದರು.
ಬೆಂಗಳೂರು ಬಸ್ ನಿಲ್ದಾಣದಂತಾದ ಕೆ.ಕೆ. ಗೆಸ್ಟ್ ಹೌಸ್: ''ಕುಮಾರಕೃಪಾಗೆ ಹೋದರೆ ಸಾಕು ಬೆಂಗಳೂರು ಬಸ್ ನಿಲ್ದಾಣಕ್ಕೆ ಹೋದಂತಾಗುತ್ತೆ. ಎಲ್ಲ ಕಡೆ ಭ್ರಷ್ಟಾಚಾರ ನಡೆಯುತ್ತಿದೆ. ಹೀಗಿರುವಾಗ ಹೇಗೆ ದಕ್ಷ ಆಡಳಿತ ನೀಡುತ್ತೀರಿ. ವರ್ಗಾವಣೆ ದಂಧೆ ನಡೆಯುತ್ತಿದೆ'' ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಗಂಭೀರ ಆರೋಪ ಮಾಡಿದರು.
''ಮೇಲಾಧಿಕಾರಿಗಳ ಲಂಚದ ಬಗ್ಗೆ ಕಲಬುರ್ಗಿಯಲ್ಲೊಬ್ಬ ಪೋಲಿಸ್ ಪೇದೆ ಹೇಳಿದ್ದಾನೆ. ಶಾಸಕರ ಭವನದ ಮುಂದೆ, ಕೆಲ ಶಾಸಕರ ಮುಂದೆ ಜನ ದಟ್ಟಣೆ ಇದೆ. ವಿಧಾನಸೌಧಕ್ಕೆ ಸಮಯ ಇದೆ. ಆದರೆ ಅಲ್ಲಿ ಸಮಯ ಇಲ್ಲ. ಎಲ್ಲ ಕಡೆಗಳಲ್ಲೂ ವರ್ಗಾವಣೆ ದಂಧೆ ಜೋರಾಗಿ ನಡೆಯುತ್ತಿದೆ. ಮಾರ್ಕೆಟ್ ಟ್ರಾನ್ಸಫರ್ ಮಾಡಿಕೊಂಡಿದ್ದೀರಾ?'' ಎಂದು ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದರು.
ಮಾಜಿ ಸಿಎಂ ಬೊಮ್ಮಾಯಿ ಮಾತಿಗೆ ಆಡಳಿತ ಪಕ್ಷದ ಸದಸ್ಯರ ವಿರೋಧ ವ್ಯಕ್ತಪಡಿಸಿದರು. ಸಚಿವ ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ಕೆಲಕಾಲ ಸದನದಲ್ಲಿ ಗದ್ದಲ ಏರ್ಪಟ್ಟಿತು. ಬಳಿಕ ಮಾತು ಮುಂದುವರಿಸಿದ ಮಾಜಿ ಸಿಎಂ ಬೊಮ್ಮಾಯಿ, ''ನಾನು ಏನು ದೊಡ್ಡ ಆರೋಪ ಮಾಡಿಲ್ಲ. ಎಲ್ಲೆಲ್ಲಿ ಜನ ದಟ್ಟಣೆ ಇದೆ, ಎಲ್ಲೆಲ್ಲಿ ಫುಲ್ ಬ್ಯುಸಿ ಇದೆ. ಮಂತ್ರಿಗಳು ಹಿಡಿದು ನಿಲ್ಲಿಸಿದ್ರು ನಿಲ್ಲೋದಿಲ್ಲ ಎಂದು ಟೀಕಿಸಿದರು. ನಿಮ್ಮ ಸುತ್ತಲೂ ನಡೆಯುತ್ತಿರೋದನ್ನು ಕಣ್ತೆರೆದು ನೋಡಿ'' ಎಂದು ಆಡಳಿತ ಪಕ್ಷಕ್ಕೆ ತಿರುಗೇಟು ನೀಡಿದರು.
''ಸರ್ಕಾರ ರಾಜ್ಯಪಾಲರಿಂದ ಭಾಷಣ ಮಾಡಿಸಿದೆ. ಬಜೆಟ್ ಮಂಡಿಸಿದೆ ಆದ್ರೆ ಇದರಲ್ಲಿ ಗುರಿ ಕಾಣಿಸುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರ ಗೊತ್ತು ಗುರಿ ಇಲ್ಲದೇ ನಡೆಯಲಿದೆ. ಭೂಸಿರಿ ಸೇರಿದಂತೆ ಹಲವು ಯೋಜನೆಗಳನ್ನ ಕೈಬಿಟ್ರಿ. ಈ ಸರ್ಕಾರವನ್ನ ರೈತ ಪರ ಸರ್ಕಾರ ಎಂದು ಕರೆಯಲು ಸಾಧ್ಯವೇ? ಅಭಿವೃದ್ಧಿ ಜನಕಲ್ಯಾಣ ಅಂದ್ರು, ಇದೇನಾ ಕರ್ನಾಟಕ ಮಾದರಿ. ಕರ್ನಾಟಕ ಮುನ್ನೋಟ ಇರುವ ರಾಜ್ಯ. ಇವರ ಕೆಲಸದಲ್ಲಿ ಆದು ಕಾಣ್ತಿಲ್ಲ. ಕಾರ್ಯಕ್ರಮ ಅನುಷ್ಠಾನ ಮಾಡುವಲ್ಲಿ ಎಡವಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗಿದೆ. ವಸೂಲಿ ಮಾಡಲು ಟಾಸ್ಕ್ ಕೊಟ್ಟಿದ್ದಾರೆ ಅನ್ನೋ ಆಡಿಯೋ ಬಿಡುಗಡೆಯಾಗಿದೆ'' ಎಂದು ವಾಗ್ದಾಳಿ ನಡೆಸಿದರು.
ಜಾರಿಯಾಗದ ಯುವನಿಧಿ: ''ಯುವನಿಧಿ ಯೋಜನೆ ಪದವಿ ಮುಗಿಸಿ ಆರು ತಿಂಗಳು ಉದ್ಯೋಗ ಸಿಗದವರಿಗೆ ನೀಡುವುದಾಗಿ ಹೇಳುತ್ತಾರೆ. ಪದವಿ ಮುಗಿಸಿ ಎರಡು ಮೂರು ವರ್ಷ ಕಳೆದರೂ ಉದ್ಯೋಗ ಸಿಗದವರಿಗೆ ಯುವನಿಧಿ ನೀಡಿದ್ದರೆ ಅನುಕೂಲ ಆಗುತ್ತಿತ್ತು. ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಿರಿ'' ಎಂದು ಟೀಕಿಸಿದರು.
''ಗೃಹ ಜ್ಯೋತಿ ಯೋಜನೆ ಅಡಿಯಲ್ಲಿ 200 ಯುನಿಟ್ ವಿದ್ಯುತ್ ಉಚಿತ ಕೊಡುವುದಾಗಿ ಹೇಳಿ, ಈಗ ವಾರ್ಷಿಕ ಬಳಕೆಯ ಸರಾಸರಿ ಮೇಲೆ ಹತ್ತು ಪರ್ಸೆಂಟ್ ಹೆಚ್ಚಿಗೆ ನೀಡುವುದಾಗಿ ಹೇಳುತ್ತಿದ್ದೀರಿ. ಗ್ರಾಮೀಣ ಮಹಿಳೆಯರಿಗೆ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಬಾರದೇ ಅವರಿಗೆ ಉಚಿತ ವಿದ್ಯುತ್ ನಿಂದ ಬೇರೆ ಬೇರೆ ಕೆಲಸಗಳಿಗೆ ಅನೂಕೂಲ ಆಗುತ್ತಿರಲಿಲ್ಲವೇ, ನಗರದ ಮಹಿಳೆಯರೂ ಮಾತ್ರ ಉತ್ತಮ ಜೀವನ ನಡೆಸಬೇಕಾ, ಹಳ್ಳಿ ಮಹಿಳೆಯರು ಹೊಗೆ ಕುಡಿತಾ ಇರಬೇಕಾ'' ಎಂದು ಪ್ರಶ್ನಿಸಿದರು.
''ಈ ಮಧ್ಯೆ ಕರೆಂಟ್ ದರ ಹೆಚ್ಚಳ ಮಾಡಿ ಜನರಿಗೆ ಭಾರ ಹಾಕಿದ್ದಾರೆ. ಗೃಹಜ್ಯೋತಿ ಯೋಜನೆ ಅನಷ್ಠಾನದಲ್ಲಿ ನುಡಿದಂತೆ ನಡೆದಿಲ್ಲ. ಗೃಹ ಲಕ್ಷ್ಮೀ ಯೋಜನೆಯಲ್ಲಿ ಅತ್ತೆ- ಸೊಸೆಗೆ ಜಗಳ ಹಚ್ಚುವ ಕೆಲಸ ಮಾಡಿದ್ದಾರೆ. ಗೃಹಲಕ್ಷ್ಮೀಗೆ ಗ್ರಹಣ ಹಿಡಿದಿದೆ. ಹೆಣ್ಣು ಮಕ್ಕಳಿಗೆ ಬಸ್ ಪಾಸ್ ವ್ಯವಸ್ಥೆ ಮಾಡಿದ್ದಾರೆ. ಅದರ ಅವಾಂತರ ಎಲ್ಲರೂ ನೋಡಿದ್ದೇವೆ. ಪುರುಷರಿಗೂ ಮಹಿಳೆಯರ ಟಿಕೆಟ್ ಕೊಟ್ಟು ಕಾರ್ಪೊರೇಷನ್ ಹೆಚ್ಚಿನ ಹಣ ಪಡೆಯಲು ಪ್ರಯತ್ನ ನಡೆದಿದೆ. ಈ ಮಿಸ್ ಯೂಸ್ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದೀರಿ'' ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: Annabhagya scheme: ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಗೆ ಸಿಎಂ ಚಾಲನೆ.. ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಕಿಡಿ