ದೇವನಹಳ್ಳಿ(ಬೆಂಗಳೂರು): ಮುದ್ದಿನ ನಾಯಿಮರಿಯೊಂದಿಗೆ ಕುಟುಂಬದವರು ದೆಹಲಿ ಮತ್ತು ಅಮೃತಸರಕ್ಕೆ 12 ದಿನಗಳ ಪ್ರವಾಸ ಹೊರಟ್ಟಿದ್ದರು, ಆದರೆ ಏರ್ ಇಂಡಿಯಾ ನಾಯಿಮರಿಯೊಂದಿಗೆ ಪ್ರಯಾಣಿಸಲು ನಿರಾಕರಿಸಿದೆ. ಇದರಿಂದ ಬೇಸತ್ತ ಕುಟುಂಬ, ತಮ್ಮ ಪ್ರವಾಸ ರದ್ದು ಮಾಡಿ ವಿಮಾನ ಯಾನ ಸಂಸ್ಥೆಯ ಕ್ರಮದ ಬಗ್ಗೆ ವಿಡಿಯೋ ಮಾಡಿ ಬೇಸರ ವ್ಯಕ್ತಪಡಿಸಿದೆ.
ಬೆಂಗಳೂರಿನ ಸಚಿನ್ ಶೆಣೈ ಪತ್ನಿ ಉಮಾ ಮತ್ತು ಮಗಳು ಆರ್ಯ ಜೊತೆಗೆ ಅವರ ಮುದ್ದಿನ ನಾಯಿ ನಾಯಿ ಫ್ಲಫಿಯೊಂದಿಗೆ 12 ದಿನಗಳ ಉತ್ತರ ಪ್ರವಾಸಕ್ಕೆ ಹೊರಟ್ಟಿದ್ದರು. ಕಳೆದ ಶನಿವಾರ ದೇವನಹಳ್ಳಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ AI 503 ವಿಮಾನದಲ್ಲಿ ದೆಹಲಿಗೆ ಪ್ರಯಾಣಿಸಲಿದ್ದರು. ಪ್ರಾರಂಭದಲ್ಲಿ ನಾಯಿ ಮರಿ ಜೊತೆ ಪ್ರಯಾಣಿಸಲು ಅವಕಾಶ ನೀಡಿದ ವಿಮಾನ ಯಾನ ಸಂಸ್ಥೆ ಸಿಬ್ಬಂದಿ, ವಿಮಾನ ಹತ್ತುವ ಸಮಯದಲ್ಲಿ ನಾಯಿಮರಿ ಪ್ರಯಾಣಕ್ಕೆ ಪೈಲಟ್ ನಿರಾಕರಿಸಿದ್ದಾರೆ. ಇದರಿಂದಾಗಿ ಕುಟುಂಬದ ಸದಸ್ಯನಂತಿದ್ದ ಮುದ್ದಿನ ಫ್ಲಫಿ ಬಿಟ್ಟು ಹೋಗಲು ಮನಸಾಗದೆ ತಮ್ಮ ಪ್ರವಾಸವನ್ನೇ ರದ್ದು ಮಾಡಿದ್ದಾರೆ.
ವಿಮಾನ ಸಂಸ್ಥೆಯ ಕ್ರಮದ ಬಗ್ಗೆ ಬೇಸರಗೊಂಡ ಸಚಿನ್ ಶೆಣೈ ಏರ್ ಪೋರ್ಟ್ನಲ್ಲಿಯೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.
'ನಿಯಮಗಳ ಪ್ರಕಾರ 5 ಕೆಜಿ ತೂಕದ ಬ್ಯಾಗ್ಗಳನ್ನ ಜೊತೆಯಲ್ಲಿ ತೆಗೆದುಕೊಂಡ ಹೋಗಬಹುದು. 4.2 ಕಿ.ಗ್ರಾಂ ತೂಕದ ಫ್ಲಫಿಯನ್ನ ವಿಮಾನದ ಕ್ಯಾಬಿನ್ ಒಳಗೆ ತೆಗೆದುಕೊಂಡು ಹೋಗಲು ಅವಕಾಶ ಇತ್ತು. ನಾಯಿಮರಿಗೆ ಎಲ್ಲಾ ರೀತಿಯ ತಪಾಸಣೆ ಮಾಡಲಾಗಿತ್ತು ಮತ್ತು ಅದಕ್ಕೆ ಬೋರ್ಡಿಂಗ್ ಪಾಸ್ ಸಹ ನೀಡಲಾಗಿತ್ತು. ವಿಮಾನ ನಿಲ್ದಾಣದಲ್ಲಿ 4 ಗಂಟೆ ಕಾದರು ನಾಯಿಮರಿ ಗಲಾಟೆ ಮಾಡಿಲ್ಲ. ಪ್ರಯಾಣಿಕರಿಗೆ ತೊಂದರೆಯಾಗುವಂತೆ ಬೋಗಳಿಲ್ಲ. ಆದರೆ ವಿಮಾನದ ಕ್ಯಾಪ್ಟನ್ ಚೋಪ್ರಾ ನಾಯಿಮರಿಯ ಪ್ರಯಾಣಕ್ಕೆ ನಿರಾಕರಿಸಿದ್ದಾರೆ ' ಎಂದು ವಿಡಿಯೋದಲ್ಲಿ ದೂರಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಏರ್ ಇಂಡಿಯಾ, ಸಚಿನ್ ಶೆಣೈರವರ ದೆಹಲಿ ಪ್ರಯಾಣಕ್ಕೆ ಎಲ್ಲಾ ರೀತಿಯ ಕ್ರಮಗಳನ್ನ ತೆಗೆದುಕೊಳ್ಳಲಾಗಿತ್ತು, ಆದರೆ ನಾಯಿಮರಿಯ ಪ್ರಯಾಣಕ್ಕೆ ಅನುಮತಿ ನೀಡುವ ಅಂತಿಮ ತೀರ್ಮಾನ ವಿಮಾನ ಪೈಲಟ್ಗೆ ಇರುತ್ತದೆ ಎಂದಿದೆ.
ಇದನ್ನೂ ಓದಿ: ವಿಯೆಟ್ ಜೆಟ್ಏರ್ನಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ವಂಚನೆ