ಬೆಂಗಳೂರು: ಕೊರೊನಾದಿಂದಾಗಿ ಅದೆಷ್ಟೋ ಮಂದಿ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸಂಕಷ್ಟ ಸಮಯವನ್ನೇ ದುರ್ಬಳಕೆ ಮಾಡಿಕೊಳ್ಳುವ ಆನ್‌ಲೈನ್ ವಂಚಕರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿರುವ ಯುವ ಸಮೂಹವನ್ನು ಟಾರ್ಗೆಟ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ವಸೂಲಿ ಮಾಡುತ್ತಿದ್ದಾರೆ.
ಕೆಲಸ ತೊರೆಯುವುದಾಗಿ ಹೇಳಿದ ಯುವಕನಿಗೆ ನಕಲಿ ಕಂಪನಿ ಸೃಷ್ಟಿಸಿದ ಹೈಟೆಕ್ ಖದೀಮರು ಕೋರ್ಟ್ನಲ್ಲಿ ಕೇಸ್ ಹಾಕುತ್ತೇವೆ ಎಂದು ಭಯ ಹುಟ್ಟಿಸಿ ಒಟ್ಟು 1.03 ಲಕ್ಷ ರೂಪಾಯಿ ವಸೂಲಿ ಮಾಡಿರುವುದು ಬೆಳಕಿಗೆ ಬಂದಿದೆ.
ಗದಗ ಮೂಲದ 19 ವರ್ಷದ ಸಂತೋಷ್ ಪಲ್ಲೇದ್ ಆನ್‌ಲೈನ್ ಖದೀಮರ ಗಾಳಕ್ಕೆ ಸಿಕ್ಕಿಹಾಕಿಕೊಂಡು ಹಣ ಕಳೆದುಕೊಂಡ ಯುವಕನಾಗಿದ್ದಾರೆ. ನಗರದ ಹೂಡಿಯಲ್ಲಿ ವಾಸವಾಗಿದ್ದ ಸಂತೋಷ್ ಎಲೆಕ್ಟ್ರಾನಿಕ್ ಸಿಟಿ ಬಳಿಯ ಖಾಸಗಿ ಶೈಕ್ಷಣಿಕ ಸಂಸ್ಥೆಯಲ್ಲಿ ಡಿಪ್ಲೋಮಾ ಕೋರ್ಸ್ ಮಾಡುತ್ತಿದ್ದ. ವಾರಕ್ಕೆ ಒಂದು ದಿನ ಮಾತ್ರ ನಡೆಯುವ ತರಗತಿಗೆ ಹಾಜರಾಗಿ ಇನ್ನುಳಿದ ದಿನಗಳಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ.
ಬಿಡುವಿನ ವೇಳೆಯಲ್ಲಿ ಕೆಲಸ ಮಾಡಲು ನಿರ್ಧರಿಸಿದ್ದ ಸಂತೋಷ್ ಕೆಲಸಕ್ಕಾಗಿ ಆನ್ಲೈನ್ನಲ್ಲಿ ಅರ್ಜಿ ಹಾಕಿದ್ದ. ಕೆಲ ದಿನಗಳ ಬಳಿಕ ಐಜಿಎಂ ಸರ್ವಿಸ್ ಕಂಪನಿ ಸೋಗಿನಲ್ಲಿ ಕರೆ ಮಾಡಿದ ಖದೀಮರು ಆನ್ಲೈನ್ನಲ್ಲಿ ಒಂದು ಗಂಟೆ ಕೆಲಸ ಮಾಡಿದರೆ ನೂರಾರು ರೂಪಾಯಿ ಸಂಪಾದಿಸಬಹುದು ಎಂದು ಆಮಿಷವೊಡ್ಡಿದ್ದಾರೆ.
ಇದಕ್ಕೆ ಒಪ್ಪಿ ಕೆಲ ದಿನಗಳ ಕಾಲ ಸಂತೋಷ್ ಕೆಲಸ ಮಾಡಿದ್ದಾನೆ. ಒಂದು ಗಂಟೆ ಹೇಳಿ ಏಳು ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದರೂ ಕಂಪನಿ ನೀಡಿದ ಟಾರ್ಗೆಟ್ ಮುಗಿಯುತ್ತಿರಲಿಲ್ಲ. ಇದರಿಂದ ಅಸಮಾಧಾನಗೊಂಡು ಕೆಲಸ ಬಿಡುವ ತೀರ್ಮಾನವನ್ನು ಕಂಪನಿಯ ಮುಂದಿಟ್ಟಿದ್ದಾನೆ.
ಕೆಲಸ ಬಿಟ್ಟರೆ ಕೋರ್ಟ್ನಲ್ಲಿ ಕೇಸ್ ಹಾಕುತ್ತೇವೆ:
ಇಲ್ಲಿಂದ ಖದೀಮರ ನಿಜವಾದ ಮುಖ ಅನಾವರಣಗೊಂಡಿದೆ. ನಿಮ್ಮ ಜೊತೆ ಕಂಪನಿಯು 11 ತಿಂಗಳವರೆಗೂ ಒಪ್ಪಂದ ಮಾಡಿಕೊಂಡಿದೆ. ಏಕಾಏಕಿ ಕೆಲಸ ಬಿಟ್ಟರೆ ಕಾನೂನು ಸಮಸ್ಯೆ ಎದುರಾಗಲಿದೆ. ಒಂದು ವೇಳೆ ಕೆಲಸ ಬಿಟ್ಟರೆ 7 ತಿಂಗಳ ಸಂಬಳ ಅಂದರೆ 48 ಸಾವಿರ ರೂಪಾಯಿ ನೀಡಿ ಉಳಿದ ಹಣ ಕಂಪನಿ ಭರಿಸಿಕೊಳ್ಳಲಿದೆ. ಹಣ ನೀಡದಿದ್ದರೆ ನಿಮ್ಮ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದು ಖದೀಮರು ಬೆದರಿಸಿದ್ದಾರೆ.
ಇದರಿಂದ ಆತಂಕಕ್ಕೆ ಒಳಗಾದ ಸಂತೋಷ್ ಸ್ನೇಹಿತರ ಬಳಿ ಸಾಲ ಮಾಡಿ 50 ಸಾವಿರ ರೂಪಾಯಿ ನೀಡಿದ್ದಾರೆ. ಇಷ್ಟಾದರೂ ಕೆಲ ದಿನಗಳ ಬಳಿಕ ಮತ್ತೆ ಕರೆ ಮಾಡಿದ ವಂಚಕರು ಕೆಲಸ ತೊರೆದ ಸಂಬಂಧ ನಿಮ್ಮ ವಿರುದ್ಧ ಗುಜರಾತ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಲುವಾಗಿ ನ್ಯಾಯಾಲಯಕ್ಕೆ ಹಾಜರಾಗಲೇಬೇಕು ಎಂದು ಹೇಳಿದ್ದಾರೆ.
ಇದರಿಂದ ಸಂತೋಷ್ ಇನ್ನಷ್ಟು ಆತಂಕಕ್ಕೆ ಒಳಗಾಗಿದ್ದಾನೆ. ಕೋರ್ಟ್ ಹಾಜರಾಗಿರುವಂತೆ ಬಿಂಬಿಸಲು ನಿಮ್ಮ ಸಹಿ ನಕಲು ಮಾಡಿ ಕೋರ್ಟ್ಗೆ ಬರದಂತೆ ಹಾಗೂ ಕೇಸ್ ಮುಚ್ಚಿ ಹಾಕುವಂತೆ ಮಾಡಲು ಪ್ರತಿ ಸೈನ್ 6,900 ರೂ.ನಂತೆ ಒಟ್ಟು 8 ಸಹಿಗಾಗಿ 55,200 ರೂಪಾಯಿ ಹಣ ನೀಡಬೇಕೆಂದು ಖದೀಮರು ತಾಕೀತು ಮಾಡಿದ್ದಾರೆ. ಅನ್ಯವಿಧಿಯಿಲ್ಲದೆ ಸಂತೋಷ್ ಹಣ ನೀಡಿದ್ದಾರೆ. ಹೀಗೆ ಹಂತ ಹಂತವಾಗಿ ಒಟ್ಟು 1.03 ಲಕ್ಷ ರೂಪಾಯಿ ಪಾವತಿಸಿದ್ದಾನೆ. ಸ್ನೇಹಿತರ ಬಳಿ ಈ ವಿಚಾರ ಹೇಳಿದಾಗ ನಕಲಿ ಕಂಪನಿ ಸೃಷ್ಟಿಸಿಕೊಂಡು ಸೈಬರ್ ಖದೀಮರು ಹಣ ವಂಚಿಸಿರುವ ಬಗ್ಗೆ ಬಹಿರಂಗವಾಗಿದೆ. ಬಳಿಕ ಸಂತೋಷ್, ವಂಚಕರ ವಿರುದ್ಧ ವೈಟ್ ಫೀಲ್ಡ್ ವಿಭಾಗದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.