ಬೆಂಗಳೂರು : ತ್ರಿವಿಧ ದಾಸೋಹಿ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಲಿಂಗೈಕ್ಯರಾದ ದಿನ ಜನವರಿ 21. ಅದೇ ದಿನವನ್ನು 'ದಾಸೋಹ ದಿನ'ವೆಂದು ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಗಳು ಕಾಯಕವೇ ಕೈಲಾಸ ಎಂಬ ತತ್ವದಡಿ 1930ರಲ್ಲಿ ಸಿದ್ದಗಂಗಾ ಮಠದ ಜವಾಬ್ದಾರಿ ಹೊತ್ತು ಅಂದಿನಿಂದಲೂ ನಿರಂತರವಾಗಿ ಮಠಕ್ಕೆ ಬರುವ ಲಕ್ಷಾಂತರ ಬಡ ಮಕ್ಕಳಿಗೆ ಜಾತಿ-ಧರ್ಮ ಭೇದವಿಲ್ಲದೇ ವಿದ್ಯೆ, ವಸತಿ, ಅನ್ನ ನೀಡುವ ಮೂಲಕ ತ್ರಿವಿಧ ದಾಸೋಹಿಗಳಾಗಿದ್ದರು.
1960ರ ದಶಕದಲ್ಲಿ ಭಾರತ ದೇಶ ಆಹಾರದ ಕೊರತೆಯನ್ನು ಎದುರಿಸುತ್ತಿರುವಾಗ ಶ್ರೀಗಳು ಸ್ವತಃ ತಾವೇ ಜೋಳಿಗೆ ಹಿಡಿದು ಜನರಿಂದ ದಾನ ಪಡೆದು ಹಸಿವು ನೀಗಿಸಿದರು. ಶ್ರೀಗಳ ಪರಂಪರೆಯಂತೆ ಇಂದಿಗೂ ಸಾವಿರಾರು ಬಡ ಮಕ್ಕಳಿಗೆ ಹಾಗೂ ಭಕ್ತರಿಗೆ ನಿತ್ಯ ದಾಸೋಹ ಮಾಡಲಾಗುತ್ತಿದೆ. ಶ್ರೀಗಳು ಒಂಬತ್ತು ದಶಕಗಳಿಗೂ ಮೀರಿ ನಿತ್ಯ ದಾಸೋಹಗೈದು ನಾಡಿನ ಇತರ ಎಲ್ಲರಿಗೂ ಮಾದರಿಯಾಗಿದ್ದು, ದಾಸೋಹ ಶ್ರೇಷ್ಠರಾಗಿದ್ದವರು.
ಶ್ರೀಗಳು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಲಿಂಗೈಕ್ಯರಾಗಿದ್ದು, ಇವರು ನಿತ್ಯಪೂಜ್ಯರು ಹಾಗೂ ಕಾಲಕಾಲಕ್ಕೂ ಅನುಸರಣೀಯರಾಗಿದ್ದು, ಇವರ ಅಭೂತಪೂರ್ವ ಸೇವೆಯನ್ನು ಸ್ಮರಿಸುವ ಸಲುವಾಗಿ ಶ್ರೀಗಳು ಲಿಂಗೈಕ್ಯರಾದ ಜನವರಿ 21 ಅನ್ನು ಸರ್ಕಾರದ ವತಿಯಿಂದ ದಾಸೋಹ ದಿನ ಎಂದು ಆಚರಿಸಲು ತಿಳಿಸಿದೆ.
ಈ ಬಗ್ಗೆ ಶ್ರೀ ಡಾ.ಶಿವಕುಮಾರ ಮಹಾಸ್ವಾಮಿಯವರ ಭಾವಚಿತ್ರದ ಪ್ರತಿಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಪಡೆದುಕೊಂಡು ಜ.21ರ ದಿನದಂದು ದಾಸೋಹ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಸಂಬಂಧಪಟ್ಟ ಇಲಾಖೆಗಳು ಈ ಬಗ್ಗೆ ರೂಪುರೇಷೆಗಳನ್ನು ತಯಾರಿಸಿ ಕಾರ್ಯಕ್ರಮವನ್ನು ಜಾರಿಗೊಳಿಸಲು ಅಗತ್ಯ ಕ್ರಮವಹಿಸುವಂತೆ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.
ಓದಿ: ನಿಗಮ-ಮಂಡಳಿ ಅಧ್ಯಕ್ಷರಿಂದ ರಾಜೀನಾಮೆ ಪಡೆಯುವಂತೆ ಬೊಮ್ಮಾಯಿಗೆ ಬಂದಿದೆಯಾ ಸೂಚನೆ?