ಬೆಂಗಳೂರು: ''ಅಧಿಕಾರಿಗಳು ಹಾಗೂ ಬೆಂಗಳೂರಿನ ಪ್ರಮುಖರನ್ನು ಸೇರಿ ಒಂದು ಸಮಿತಿ ರಚಿಸಿ, ಬೆಂಗಳೂರಿನ ಅಭಿವೃದ್ಧಿಗೆ ಆರು ತಿಂಗಳಲ್ಲಿ ನೀಲನಕ್ಷೆ, ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗುವುದು'' ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ತಿಳಿಸಿದರು.
ಬೆಂಗಳೂರಿಗೆ ಹೊಸ ರೂಪ ನೀಡಿ, ಸಮಗ್ರ ಅಭಿವೃದ್ಧಿ, ಬ್ರ್ಯಾಂಡ್ ಬೆಂಗಳೂರು ಕುರಿತು ಬೆಂಗಳೂರಿನ 42 ಪ್ರಮುಖ ವ್ಯಕ್ತಿಗಳ ಜತೆ ವಿಧಾನಸೌಧದಲ್ಲಿ ಸುದೀರ್ಘ ಸಭೆ ನಡೆಸಲಾಯಿತು. ಬಳಿಕ ಮಾತನಾಡಿದ ಡಿಸಿಎಂ, ''ಈ ಸಭೆಯಲ್ಲಿ ಅನೇಕ ಮೌಲ್ಯಯುತ ಸಲಹೆಗಳು ಬಂದಿವೆ. ಎಲ್ಲರ ಅನುಭವ ಅಭಿಪ್ರಾಯ ಪಡೆಯುತ್ತಿದ್ದೇನೆ. ಮೊದಲು ಎಲ್ಲಾ ಪಕ್ಷಗಳ ಶಾಸಕರ ಅಭಿಪ್ರಾಯ ಪಡೆದಿದ್ದೆ. ಈಗ ಕೈಗಾರಿಕೆ, ಬಂಡವಾಳ ಹೂಡಿಕೆದಾರರ ಅಭಿಪ್ರಾಯ ಪಡೆದಿದ್ದೇನೆ. ಮುಂದೆ ಮತ್ತೊಂದು ಹಂತದ ಸಭೆ ಮಾಡುತ್ತೇನೆ. ಮುಂದಿನ ವಾರ ಸಾರ್ವಜನಿಕರ ಅಭಿಪ್ರಾಯ ಪಡೆಯಲಾಗುವುದು'' ಎಂದರು.
''ಹೈ ಡೆನ್ಸಿಟಿ ಕಾರಿಡಾರ್, ಕಸ ಹಾಗೂ ಕೊಳಚೆ ನೀರು ನಿರ್ವಹಣೆ, ಕೊಳಚೆ ನೀರು ಪರಿಷ್ಕರಣೆ ಮತ್ತು ಮರುಬಳಕೆ, ಕಾವೇರಿ ನೀರು ಪೂರೈಕೆ, ಮೆಟ್ರೋ ಸಂಪರ್ಕ ವಿಸ್ತರಣೆ, ಮೊನೊ ರೈಲು, ಉಪನಗರ ರೈಲು, ಉತ್ತಮ ಗುಣಮಟ್ಟದ ಶಿಕ್ಷಣ, ಕೊಳಗೇರಿ ಪ್ರದೇಶ ಅಭಿವೃದ್ಧಿ, ರಸ್ತೆ ಅಗಲೀಕರಣ, ಎಲಿವೇಟೆಡ್ ರಸ್ತೆ, 20 ಪ್ರಮುಖ ಜಕ್ಷನ್ ರಸ್ತೆಗಳ ಬಗ್ಗೆ ಗಮನ, ನೈಸ್ ರಸ್ತೆಯನ್ನು ವರ್ತುಲ ರಸ್ತೆ ಆಗಿ ಮಾರ್ಪಾಡು, ಪಾದಚಾರಿ ಮಾರ್ಗ ಸುಧಾರಣೆ, ನಗರದಲ್ಲಿ ಸುರಂಗ ರಸ್ತೆಗಳ ನಿರ್ಮಾಣ, ಕೆಲವು ಪ್ರದೇಶ 24/7 ತೆರೆಯಲು, ವಾಹನ ನಿಲುಗಡೆ, ಭ್ರಷ್ಟಾಚಾರ ನಿಯಂತ್ರಣ ಸೇರಿದಂತೆ ಅನೇಕ ಸಲಹೆ ನೀಡಿದ್ದಾರೆ'' ಎಂದು ತಿಳಿಸಿದರು.
''ನಮ್ಮ ಆರ್ಥಿಕತೆ ಗಮನದಲ್ಲಿ ಇಟ್ಟುಕೊಂಡು ಯೋಜನೆ ರೂಪಿಸಬೇಕು. ಬೆಂಗಳೂರಿನ ಸ್ವಾಭಿಮಾನ, ಗೌರವ ಉಳಿಸಲು ಸಲಹೆ ಕೇಳಿದ್ದೇನೆ. ನಾನು ಕೆಲವು ಸಲಹೆ ಒಪ್ಪುತ್ತೇನೆ. ಎಲ್ಲರೂ ನಮಗೆ ಸಲಹೆ ನೀಡಿದ್ದು, ಸ್ಯಾಟಲೈಟ್ ಟೌನ್ ನಿರ್ಮಾಣ ಮಾಡಬೇಕು ಎಂದು ಹೇಳಿದ್ದಾರೆ. ಫೆರಿಫೆರಲ್ ರಿಂಗ್ ರಸ್ತೆ ಜಾರಿಗೆ ಒತ್ತು ನೀಡಲಾಗುವುದು. ಬೆಂಗಳೂರು ಯೋಜಿತ ನಗರ ಅಲ್ಲ. ಒಂದೇ ದಿನದಲ್ಲಿ ಬದಲಾವಣೆ ಸಾಧ್ಯವಿಲ್ಲ. ಎಲ್ಲರ ಕಷ್ಟಪಟ್ಟು ಉಳಿಸಿಕೊಂಡಿರುವ ಆಸ್ತಿ ಬಗ್ಗೆ ಗೌರವಿಸಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಹಾಗೂ 2 ಮತ್ತು 3ನೇ ದರ್ಜೆ ನಗರಗಳ ಬಗ್ಗೆ ಗಮನಹರಿಸಿ ಬೆಂಗಳೂರಿನ ಮೇಲಿನ ಒತ್ತಡ ಇಳಿಸಬೇಕಿದೆ'' ಎಂದು ತಿಳಿಸಿದರು.
''ಬೆಂಗಳೂರಿನ ಅಭಿವೃದ್ಧಿ ವಿಚಾರವಾಗಿ ಟಾಸ್ಕ್ ಫೋರ್ಸ್ ರಚನೆ ಬಗ್ಗೆ ಪ್ರತಿಕ್ರಿಯಿಸುತ್ತಾ, ಅನೇಕ ವರ್ಗ, ಸಂಘ ಸಂಸ್ಥೆಗಳ ಪ್ರಮುಖರ ಜೊತೆ ಈ ಸಭೆಯಲ್ಲಿ ಚರ್ಚೆ ಮಾಡಲಾಗಿದೆ. ಅವರು ಈ ಬಗ್ಗೆ ಸಲಹೆ ನೀಡಿದ್ದು, ನಾನು ಸಾರ್ವಜನಿಕ ಅಭಿಪ್ರಾಯ ಪಡೆದು ನಂತರ ಸರ್ಕಾರದ ವತಿಯಿಂದ ತೀರ್ಮಾನ ಮಾಡುತ್ತೇವೆ. ಯಾರದೋ ಕಟ್ಟಡವನ್ನು ಏಕಾಏಕಿ ತೆರವು ಮಾಡಲು ಸಾಧ್ಯವಿಲ್ಲ. ಯಾರಿಗೂ ತೊಂದರೆ ಕೊಡಲು ಆಗುವುದಿಲ್ಲ'' ಎಂದು ನುಡಿದರು.
ಬೆಂಗಳೂರು ಹೊಸ ವಿಮಾನ ನಿಲ್ದಾಣ ಕಷ್ಟಸಾಧ್ಯ: ''ಬೆಂಗಳೂರಲ್ಲಿ ಹೊಸ ವಿಮಾನ ನಿಲ್ದಾಣ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ಸಂಬಂಧ ಪ್ರಸ್ತಾವನೆ ಇದೆ. ಆದರೆ, ಅದು ಕಷ್ಟ ಸಾಧ್ಯ ಎಂದರು. ಬೆಂಗಳೂರಲ್ಲಿ ಹೊಸ ನಿಲ್ದಾಣ ವಿಮಾನ ನಿಲ್ದಾಣ ಸಂಬಂಧ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಜೊತೆ ಒಪ್ಪಂದ ಮಾಡಲಾಗಿದ್ದು, ಅದರಂತೆ ನಿರ್ದಿಷ್ಟ ಕಿಲೋಮೀಟರ್ ಅಂತರದವರೆಗೆ ಹೊಸ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಹಾಗಿಲ್ಲ. ಹೊಸ ವಿಮಾನ ನಿಲ್ದಾಣಕ್ಕೆ ತಾಂತ್ರಿಕ ತೊಡಕು ಇದೆ. ಇದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಬೆಂಗಳೂರಲ್ಲಿ ಹೊಸ ವಿಮಾನ ನಿಲ್ದಾಣ ನಿರ್ಮಾಣ ಕಷ್ಟ ಸಾಧ್ಯ'' ಎಂದರು.
ವಿಧಾನಸೌಧದಲ್ಲಿ ನಡೆದ ವಿವಿಧ ಕ್ಷೇತ್ರಗಳ ಗಣ್ಯರ ಜೊತೆಗಿನ ಬ್ರ್ಯಾಂಡ್ ಬೆಂಗಳೂರು ಸಭೆಯಲ್ಲಿ ಸಚಿವರಾದ ಕೃಷ್ಣಬೈರೇಗೌಡ, ಬೈರತಿ ಸುರೇಶ್, ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ, ಉದ್ಯಮಿಗಳಾದ ಆರ್. ಕೆ. ಮಿಶ್ರಾ, ಇರ್ಫಾನ್, ಕಿರಣ್ ಮುಜುಂದಾರ್ ಷಾ, ಪ್ರಶಾಂತ್, ಗೀತಾಂಜಲಿ ಕಿರ್ಲೊಸ್ಕರ್, ಡಾ ಮಧುಕರ್ ಕಾಮತ್, ಎಂ. ಆರ್. ಜೈಶಂಕರ್, ರಾಜಾ ಬಾಗ್ಮನೆ, ಉಲ್ಲಾಸ್ ಕಾಮತ್, ಅರುಣ್ ಚಿಟ್ಟಿಲಾಪಿಲ್ಲಿ, ಕ್ರಿಕೆಟಿಗ ಬ್ರಿಜೇಶ್ ಪಟೇಲ್, ರಾಜ್ಯಸಭೆ ಸದಸ್ಯ ಜಿ. ಸಿ. ಚಂದ್ರಶೇಖರ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಡಿಎ ಅಧ್ಯಕ್ಷ ರಾಕೇಶ್ ಸಿಂಗ್, ನಿವೃತ್ತ ಐಎಎಸ್ ಅಧಿಕಾರಿಗಳಾದ ಬಿ. ಎಸ್. ಪಾಟೀಲ್, ಸಿದ್ದಯ್ಯ, ರವಿಚಂದ್ರ ಮತ್ತಿತರರು ಭಾಗವಹಿಸಿದ್ದರು.