ಬೆಂಗಳೂರು: ವಿದ್ಯಾರ್ಥಿಯೋರ್ವ ಇನ್ಸ್ಟಾಗ್ರಾಮ್ನಲ್ಲಿ SORRY ಎಂದು ಬರೆದು ಅಜ್ಜಿ ಮನೆಗೆ ಹೋಗಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮನೋಜ್ ಆತ್ಮಹತ್ಯೆಗೆ ಶರಣಾದವ. ಮಂಡ್ಯ ಮೂಲದ ರಮೇಶ್ ಗೌಡ ಮತ್ತು ಲತಾ ದಂಪತಿ ಪುತ್ರನಾಗಿದ್ದು, ಗದೇವನಹಳ್ಳಿಯಲ್ಲಿ ವಾಸವಾಗಿದ್ದ. 19 ವರ್ಷದ ಮನೋಜ್ ನಾಗರಬಾವಿ ಬಳಿಯ ಕೆಎಲ್ಇ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ಓದುತ್ತಿದ್ದ. ಎಲ್ಲರ ಜೊತೆಗೆ ಖುಷಿ ಖುಷಿಯಾಗೇ ಇದ್ದನಂತೆ ಆದರೆ, ಕಳೆದ ಒಂದು ತಿಂಗಳಿಂದ ಕಾಲೇಜಿಗೂ ಹೋಗ್ತಿರ್ಲಿಲ್ವಂತೆ. ಒಂದು ವಾರದಿಂದ ಸಾಮಾಜಿಕ ಜಾಲತಾಣಗಳಲ್ಲಿ ಬರೀ ದುಃಖದ ಸ್ಟೇಟಸ್ಗಳನ್ನು ಹಾಕುತ್ತಿದ್ದ ಎನ್ನಲಾಗಿದೆ. ಇಂದು ಬೆಳಗ್ಗೆ ಈತನಿಗೆ ಸ್ನೇಹಿತರು ಎಷ್ಟು ಬಾರಿ ಕರೆ ಮಾಡಿದ್ರು ಉತ್ತರಿಸದಿದ್ದಾಗ ಮನೋಜ್ ತಂದೆಗೆ ಕರೆ ಮಾಡಿದ್ದಾರೆ. ಆಗ ವಿಚಾರ ಬೆಳಕಿಗೆ ಬಂದಿದೆ.
ಅಜ್ಜಿಮನೆಗೆ ಹೋಗಿ ಆತ್ಮಹತ್ಯೆ: ಮನೋಜ್ ಮನೆ ಆತನ ಅಜ್ಜಿಯ ಮನೆ ಸಮೀಪವೇ ಇದೆ. ಹಾಗಾಗಿ ಪ್ರತಿ ದಿನ ಮನೆಯಲ್ಲಿ ಊಟ ಮಾಡಿ ಅಜ್ಜಿ ಮನೆಗೆ ಹೋಗಿ ಮಲಗ್ತಿದ್ದ. ಅದರಂತೆ ನಿನ್ನೆ ರಾತ್ರಿ ಕೂಡ ಊಟ ಮಾಡಿ ಚಿಕ್ಕಮಗಳೂರಿಗೆ ಟ್ರಿಪ್ಗೆ ಹೋಗುವ ಬಗ್ಗೆ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿ ನಂತರ ಅಜ್ಜಿ ಮನೆಗೆ ಹೋಗಿದ್ದಾನೆ.
ಮನೆಗೆ ಹೋದ ನಂತರ ಸಾಮಾಜಿಕ ಜಾಲತಾಣದಲ್ಲಿ SORRY ಅಂತಾ ಬರೆದು ನೇಣಿಗೆ ಶರಣಾಗಿದ್ದಾನೆ. ಇಂದು ಬೆಳಗ್ಗೆ 7.30 ಆದರೂ ತಾಯಿಯನ್ನ ಆಫೀಸಿಗೆ ಡ್ರಾಪ್ ಮಾಡಲು ಎದ್ದು ಬಾರದೇ ಇದ್ದಾಗ ರೂಂ ಬಾಗಿಲು ಒಡೆದು ಒಳಗೆ ಹೋಗಿ ನೋಡಲಾಗಿ ಫ್ಯಾನಿನಲ್ಲಿ ಮೃತ ದೇಹ ನೇತಾಡುತ್ತಿದ್ದದ್ದು ಕಂಡುಬಂದಿದೆ.
ಘಟನೆ ಸಂಬಂಧ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಮೊಬೈಲ್ ಪರಿಶೀಲನೆ ಬಳಿಕ ಅಸಲಿ ಸತ್ಯ ಗೊತ್ತಾಗಲಿದೆ.
ಇದನ್ನೂ ಓದಿ : ತನ್ನನ್ನು ತಾನೇ ವಿವಾಹ ಮಾಡಿಕೊಳ್ಳಲಿರುವ ಯುವತಿ; 2 ವಾರ ಹನಿಮೂನ್: ಗುಜರಾತ್ನಲ್ಲೊಂದು ಸೆಲ್ಫ್ ಮ್ಯಾರೇಜ್