ಬೆಂಗಳೂರು : ಮತದಾರರ ವೈಯಕ್ತಿಕ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದ್ದ ಚಿಲುಮೆ ಸಂಸ್ಥೆಯ ಅವ್ಯವಹಾರ ಮರೆಯಾಗುವ ಮುನ್ನವೇ ಮತ್ತೊಂದು ಕಂಪೆನಿಯು ಇದೇ ಮಾದರಿಯಲ್ಲಿ ಮಾಹಿತಿ ಪಡೆದು ಚುನಾವಣಾ ಅಭ್ಯರ್ಥಿಗಳಿಗೆ ಅನಾಮಧೇಯ ಕಂಪೆನಿಯು ಮಾರಾಟ ಮಾಡುತ್ತಿರುವ ಜಾಲ ಬೆಳಕಿಗೆ ಬಂದಿದೆ.
25 ಸಾವಿರ ಕೊಟ್ಟರೆ ಸಾಕು ನಿಮ್ಮ ಕ್ಷೇತ್ರದಲ್ಲಿ ಮತದಾರರ ಮಾಹಿತಿಯನ್ನು ನಾವು ನಿಮಗೆ ಕೊಡುತ್ತೇವೆ. ಇಲ್ಲಿ ಲಕ್ಷಾಂತರ ಮತದಾರರ ಮಾಹಿತಿಯನ್ನು ಕೇವಲ 25 ಸಾವಿರಕ್ಕೆ ಮಾರಾಟ ಮಾಡುವುದಾಗಿ ಹೇಳಿದ್ದ ಅನಾಮಧೇಯ ವೆಬ್ಸೈಟ್ ಮತ್ತು ಆ್ಯಪ್ ಕಂಪೆನಿ ವಿರುದ್ಧ ಆಗ್ನೇಯ ವಿಭಾಗದ ಸೈಬರ್‌ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಮತದಾರರದ ಸಂಪೂರ್ಣ ಮಾಹಿತಿ ಸಂಗ್ರಹಿಸುತ್ತಿದ್ದ ಸಂಸ್ಥೆ: ಹಣ ಪಡೆದು ಮತದಾರರ ಮಾಹಿತಿ ಮಾರಾಟ ಮಾಡುತ್ತಿರುವ ಕಂಪನಿಯೊಂದು ಇದೀಗ ಸದ್ದು ಮಾಡುತ್ತಿದೆ. ಸದ್ಯ ಕಂಪನಿಯ ಹೆಸರನ್ನು ಬಹಿರಂಗ ಪಡಿಸದೆ ಪೊಲೀಸರು ಗೌಪ್ಯತೆ ಕಾಪಾಡಿದ್ದಾರೆ. ಚಿಲುಮೆ ಸಂಸ್ಥೆಯ ರೀತಿಯಲ್ಲಿ ಈ ಕಂಪೆನಿಯು ಸಹ ಕೆಲಸ ಮಾಡುತ್ತಿತ್ತು ಎಂಬುದು ಬಹಿರಂಗವಾಗಿದೆ. ಮತದಾರರ ಸಂಪೂರ್ಣ ವಿವರವನ್ನು ಸಂಸ್ಥೆ ಸಂಗ್ರಹಿಸುತ್ತಿತ್ತು. ನಂತರ ಪ್ರತ್ಯೇಕ ಆ್ಯಪ್ ಬಳಸಿ ಮತದಾರರ ಮಾಹಿತಿ, ಹೆಸರು, ವಿಳಾಸ, ಜಾತಿ, ಮತದಾರರು ಕಳೆದ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಿದ್ದರು. ಈ ಬಾರಿ ಯಾವ ಪಕ್ಷಕ್ಕೆ ಬೆಂಬಲಿಸಲಿದ್ದಾರೆ ಎಂಬ ಮಾಹಿತಿಯನ್ನು ಆಯಾ ಅಭ್ಯರ್ಥಿಗಳಿಗೆ ನೀಡುತ್ತಿತ್ತು ಎಂದು ಗೊತ್ತಾಗಿದೆ.
ಸೋತರೆ ಹಣ ವಾಪಸ್ ಎಂಬ ಪ್ರಣಾಳಿಕೆ: ಕಂಪನಿ ತನ್ನ ವೆಬ್ಸೈಟ್ನಲ್ಲಿ ಮತದಾರರ ಮೊಬೈಲ್ ಸಂಖ್ಯೆ ಹಾಕುತಿತ್ತು. 25 ಸಾವಿರ ರೂಪಾಯಿ ನೀಡಿದರೆ ಲಾಗ್ ಇನ್ ಐಡಿ ನೀಡುತ್ತಿದ್ದರು. ಸುಮಾರು 6 ಲಕ್ಷದಷ್ಟು ಮತದಾರರ ಮಾಹಿತಿ ಈ ಸಂಸ್ಥೆಯ ಬಳಿ ಇತ್ತು. ಇದು ನಿರ್ದಿಷ್ಟ ಕ್ಷೇತ್ರದ ಮತದಾರರ ಪಟ್ಟಿಯೇ ಅಥವಾ ಬೇರೆ ಕ್ಷೇತ್ರದ ಮಾಹಿತಿ ಇದೆಯೇ ಎಂದು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅಭ್ಯರ್ಥಿಗಳು ಈ ವೆಬ್ಸೈಟ್ ತೆಗೆದ ತಕ್ಷಣ ಸ್ವಾಗತ ಎಂಬಾ ಸಂದೇಶ ಬರುತ್ತಿತ್ತು. ನಂತರ 25 ಸಾವಿರ ಜೊತೆಗೆ 500 ಸೇವಾ ಶುಲ್ಕ ನೀಡಿದರೆ ಕ್ಷೇತ್ರದ ಮತದಾರರ ಮಾಹಿತಿ ನೀಡಿ ಅವರನ್ನು ಆರ್ಕಷಿಸುತ್ತಿತ್ತು. ಮಾಹಿತಿ ಪಡೆದು ನಿಮ್ಮ ಚುನಾವಣೆಯಲ್ಲಿ ಜಯಶಾಲಿಯಾಗಿ ಎಂದು ಇಲ್ಲಸಲ್ಲದ ಆಸೆ ಹುಟ್ಟು ಹಾಕಿದೆ. ಒಂದು ವೇಳೆ ಸೋತರೆ ಹಣ ವಾಪಸ್ ಎಂಬ ಪ್ರಣಾಳಿಕೆ ಕೂಡಾ ಈ ಅನಾಮಧೇಯ ಕಂಪನಿ ಮಾಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಎಲ್ಲಾ ವಿಚಾರವನ್ನು ಅರಿತಿದ್ದ ಪಕ್ಷೇತರ ಅಭ್ಯರ್ಥಿ ರಾಜು ಎಂಬುವವರು ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲು ಮಾಡಲಾಗಿದೆ. ಆಗ್ನೇಯ ವಿಭಾಗದ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಹ ಇದು ಇವರು ಸರ್ವೆ ಮಾಡಿದ್ದಾದ್ರು ಎಲ್ಲಿ, ಇಷ್ಟೊಂದು ಡೇಟಾ ಇವರ ಬಳಿ ಹೇಗೆ ಬಂತು?. ಇದರ ಹಿಂದೆ ಯಾರಿದ್ದಾರೆ ಅಂತ ಸಾಕಷ್ಟು ತಲೆಕೆಡಿಸಿಕೊಂಡು ಇದೀಗ ತನಿಖೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಕಾರ್ಯಕರ್ತರಿಂದ ಮತದಾರರ ಮಾಹಿತಿ ಸಂಗ್ರಹ ಆರೋಪ : ಚುನಾವಣಾ ಅಧಿಕಾರಿಗೆ ಬಿಜೆಪಿ ದೂರು