ಬೆಂಗಳೂರು : ಕದ್ದ ಚಿನ್ನ ಖರೀದಿಸಿದ ಆರೋಪದ ಮೇಲೆ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ಇಬ್ಬರು ಉದ್ಯೋಗಿಗಳ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ. ತಮ್ಮ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್‌ಐಆರ್ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಗಳಾದ ಹೊನ್ನೇಗೌಡ ಮತ್ತು ಎಚ್.ಕೆ.ಪ್ರವೀಣ್ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನ ಗೌಡರ್ ಅವರ ನ್ಯಾಯಪೀಠ ಅರ್ಜಿಯನ್ನು ಪುರಸ್ಕರಿಸಿದೆ. ಅಲ್ಲದೆ, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ. ಪ್ರಕರಣದಲ್ಲಿ ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಅನ್ನು ಆರೋಪಿಯನ್ನಾಗಿ ಮಾಡದೇ, ಕೇವಲ ಅರ್ಜಿದಾರ ಉದ್ಯೋಗಿಗಳ ಮೇಲೆ ಆರೋಪ ಹೊರಿಸಿದ ಪೊಲೀಸರ ಕಾರ್ಯವೈಖರಿ ಸಮಂಜಸವಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಪ್ರಕರಣದಲ್ಲಿ ಅರ್ಜಿದಾರರಾದ ಹೊನ್ನೆಗೌಡ (ಆರೋಪಿ-2) ಮತ್ತು ಎಚ್.ಕೆ.ಪ್ರವೀಣ್ (ಆರೋಪಿ-3) ಅವರ ವಿರುದ್ಧ ಮಾತ್ರ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದಾರೆ. ಆದರೆ, ಅರ್ಜಿದಾರರು ಕಂಪನಿಯ ಉದ್ಯೋಗಿಗಳಷ್ಟೇ. ಕಂಪನಿಯನ್ನು ಬಿಟ್ಟು ಕೇವಲ ಉದ್ಯೋಗಿಗಳ ಮೇಲೆ ಕೇಸು ದಾಖಲಿಸಿ, ಅವರ ವಿರುದ್ಧದ ಅಪರಾಧ ಕೃತ್ಯದ ಜವಾಬ್ದಾರಿ ಹೊರಸಿರುವ ಕ್ರಮ ಸರಿಯಲ್ಲ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಜೊತೆಗೆ, ಕಂಪನಿಯ ವಿರುದ್ಧವೂ ಆರೋಪ ಹೊರಿಸಬೇಕಾಗುತ್ತದೆ, ಮುಖ್ಯವಾಗಿ ತಾವು ಖರೀದಿಸಿದ ಚಿನ್ನಾಭರಣಗಳನ್ನು ದೂರುದಾರರ ಮನೆಯಿಂದ ಕಳ್ಳತನ ಮಾಡಲಾಗಿದೆ ಎಂಬ ಬಗ್ಗೆ ಸಂಪೂರ್ಣ ತಿಳುವಳಿಕೆ ಅರ್ಜಿದಾರರಿಗೆ ಇತ್ತು ಎಂಬ ಸಂಗತಿಯನ್ನು ಸಾಬೀತುಪಡಿಸುವ ಸಾಕ್ಷ್ಯಾಧಾರ ಒದಗಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಆದ್ದರಿಂದ ಅರ್ಜಿದಾರರ ಮೇಲಿನ ಪ್ರಕರಣವನ್ನು ರದ್ದುಪಡಿಸಲಾಗುತ್ತಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಉಲ್ಲೇಖಿಸಿದೆ.
ಪ್ರಕರಣದ ಹಿನ್ನೆಲೆ: ಕೆಲ ದುಷ್ಕರ್ಮಿಗಳು ವಿಜಯನಗರದ ನಿವಾಸಿ ದಿನೇಶ್ ಎಂಬುವರ ಮನೆಯಲ್ಲಿ ಚಿನ್ನಾಭರಣಗಳನ್ನು ಕದ್ದು, ಅಟ್ಟಿಕಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಮಾರಾಟ ಮಾಡಿದ್ದರು. ಈ ಕುರಿತು ದಿನೇಶ್ ದೂರು ದಾಖಲಿಸಿದ್ದರು. ಪ್ರಕರಣದ ಕುರಿತು ತನಿಖೆ ನಡೆಸಿದ್ದ ವಿಜಯನಗರ ಠಾಣಾ ಪೊಲೀಸರು, ನಿರಂತರವಾಗಿ ಕದ್ದ ಚಿನ್ನಾಭರಣಗಳನ್ನು ವ್ಯವಹರಿಸುವ, ಮನೆಯ ಅತಿಕ್ರಮ ಪ್ರವೇಶ ಮತ್ತು ವಾಸದ ಮನೆಯಲ್ಲಿ ಕಳ್ಳತನ ಮಾಡಿದ ಆರೋಪ ಸಂಬಂಧ ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನಂತರ ತನಿಖೆ ಪೂರ್ಣಗೊಳಿಸಿ ವಿಜಯನಗರ ಠಾಣಾ ಪೊಲೀಸರು, ನಗರದ 24ನೇ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯವು 2017 ರ ಸೆ.16 ರಂದು ಅರ್ಜಿದಾರರ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿತ್ತು. ಇದರಿಂದ ಪ್ರಕರಣ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೊರೆ ಹೋಗಿದ್ದರು. ಇದೀಗ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ಇದನ್ನು ಓದಿ: ಪಿಎಸ್ಐ ಹಗರಣದ ಆರೋಪಿ ಹರೀಶ್ಗೆ ಜಾಮೀನು ನಿರಾಕರಿಸಿದ ಹೈಕೋರ್ಟ್