ಬೆಂಗಳೂರು: ಮದುವೆ ಎಂಬುದು ಲೈಸೆನ್ಸ್ ಅಲ್ಲ, ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಪತಿ ನಡೆಸುವ ಲೈಂಗಿಕ ದೌರ್ಜನ್ಯವೂ ಅತ್ಯಾಚಾರಕ್ಕೆ ಸಮ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ. ಹೈಕೋರ್ಟ್ನಲ್ಲಿ ದಾಖಲಾಗಿದ್ದ ಪ್ರಕರಣವೊಂದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ರೀತಿಯಾಗಿ ಅಭಿಪ್ರಾಯಪಟ್ಟಿದ್ದು, ಪತಿ ವಿರುದ್ಧ ಪತ್ನಿ ಮಾಡಿರುವ ಗಂಭೀರ ಆರೋಪವನ್ನು ಹೈಕೋರ್ಟ್ ಮಾನ್ಯ ಮಾಡಿದೆ. ಹೃಷಿಕೇಶ್ ಸಾಹೂ ಎಂಬಾತ ಸಲ್ಲಿಸಿದ್ದ ಅರ್ಜಿ ಹಾಗೂ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಇತರೆ ಮೂರು ಅರ್ಜಿ ವಜಾಗೊಂಡಿವೆ.
ಪ್ರಕರಣವೇನು? ಬೆಂಗಳೂರಿನಲ್ಲಿ ವಾಸವಾಗಿದ್ದ ಒಡಿಶಾ ಮೂಲದ ದಂಪತಿಗೆ ಸಂಬಂಧಿಸಿರುವ ಪ್ರಕರಣ ಇದಾಗಿದೆ. 43 ವರ್ಷದ ಪತಿ ತನ್ನ 27 ವರ್ಷದ ಪತ್ನಿ ಮೇಲೆ ಅಸ್ವಾಭಾವಿಕ ರೀತಿಯ ಲೈಂಗಿಕ ಕ್ರಿಯೆ ನಡೆಸಿ, ಆಕೆಯನ್ನು ಗುಲಾಮಳಂತೆ ನೋಡಿಕೊಳ್ಳುತ್ತಿದ್ದನಂತೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣವೊಂದರಲ್ಲಿ ದೂರುದಾರಳಾಗಿರುವ ಮಹಿಳೆ ತನ್ನನ್ನು ಪತಿ ಕಾಮ ಕೃತ್ಯಗಳಿಗೆ ದಾಸಿಯಾಗುವಂತೆ ಒತ್ತಾಯಿಸಿರುವುದಾಗಿ ಹಾಗೂ ಮಗಳ ಎದುರೇ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಈ ಕುರಿತ ಪ್ರಕರಣದ ವಿಸ್ತೃತ ತನಿಖೆ ನಡೆಸಿದ ಪೊಲೀಸರು ಹೈಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ವೇಳೆ ಪೊಲೀಸರು 'ಇದೊಂದು ಬಲವಂತದ ಅತ್ಯಾಚಾರ' ಎಂಬ ಮಹತ್ವದ ವಿಚಾರವನ್ನು ಉಲ್ಲೇಖ ಮಾಡಿದ್ದರು. ಇದರ ಬೆನ್ನಲ್ಲೇ ಅತ್ಯಾಚಾರ ಆರೋಪ ಕೈಬಿಡುವಂತೆ ಪತಿಯೂ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು.
ಪತಿ ಹೇಳಿದ್ದೇನು? ಪತ್ನಿ ತನ್ನ ಮೇಲಿನ ಸೇಡಿಗಾಗಿ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಇದನ್ನು ರದ್ದು ಮಾಡುವಂತೆ ಹೃಷಿಕೇಶ್ ಸಾಹೂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದನು. ಐಪಿಸಿ ಸೆಕ್ಷನ್ 376ರ ಅಡಿ ಪತಿಗೆ ಅತ್ಯಾಚಾರ ಪ್ರಕರಣದಲ್ಲಿ ವಿನಾಯಿತಿ ಇದೆ ಎಂದು ಆರೋಪಿ ಪತಿ ಪರ ವಕೀಲರು ವಾದ ಮಂಡಿಸಿದ್ದರು. ಆದರೆ, ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್, ಅತ್ಯಾಚಾರ ಅತ್ಯಾಚಾರವೇ. ಇದು ಪತ್ನಿಯ ಮೇಲೆ ಮಾನಸಿಕ, ದೈಹಿಕವಾಗಿ ಪರಿಣಾಮ ಬೀರುತ್ತದೆ ಎಂದು ಸ್ಪಷ್ಟಪಡಿಸಿತು.
ಪತ್ನಿ ಇಚ್ಛೆಗೆ ವಿರುದ್ಧ ಲೈಂಗಿಕ ಕ್ರಿಯೆ ಅತ್ಯಾಚಾರ: ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಸೇರಿ ಅನೇಕ ದೇಶಗಳಲ್ಲೂ ಇದು ಅಪರಾಧ ಕೃತ್ಯವೇ ಆಗಿದೆ. ಹೆಂಡತಿಯ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಬಂಧ ನಡೆಸಿದರೆ ಅದು ಅತ್ಯಾಚಾರವಾಗುತ್ತದೆ. ಈ ವಿಚಾರದಲ್ಲಿ ಮಹಿಳೆ ಅಥವಾ ಪತ್ನಿ ನಡುವೆ ಯಾವುದೇ ರೀತಿಯ ತಾರತಮ್ಯ ಸರಿಯಲ್ಲ ಎಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಸ್ಪಷ್ಟಪಡಿಸಿದರು.
ಪತ್ನಿ ಎಂದರೆ ಆಕೆ ಗಂಡನ ಸ್ವತ್ತು. ಆಕೆಯ ದೇಹ, ಮನಸ್ಸು, ಆತ್ಮಗಳ ಒಡೆಯ ಎಂಬ ಹಳೆಯ ಸಾಂಪ್ರದಾಯಿಕ ಚಿಂತನೆಯನ್ನು ಅಳಿಸಬೇಕಾದ ಅಗತ್ಯವಿದೆ. ಇಂತಹ ಕಲ್ಪನೆಗಳಿಂದಲೇ ಭಾರತದಂತಹ ದೇಶದಲ್ಲಿ ವೈವಾಹಿಕ ಅತ್ಯಾಚಾರಗಳನ್ನು 'ಅಪರಾಧ' ಎಂದು ಹೇಳುವ ಕಾನೂನುಗಳಿಲ್ಲ. ಸಂವಿಧಾನದ ಅನುಚ್ಛೇದ 14, 15, 16, 21, 23, 29 243ಡಿ ಹಾಗೂ 243ಟಿ ಮಹಿಳೆ ಮತ್ತು ಪುರುಷ ಸಮಾನರು ಎನ್ನುತ್ತವೆ. ಈಗಲಾದರೂ ಕಾನೂನು ರೂಪಿಸುವವರು ಈ ಕುರಿತು ಚಿಂತಿಸಬೇಕಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.