ನೆಲಮಂಗಲ : ಸಹೋದರಿಯ ಮದುವೆ ಮಾಡಲು ಮನೆಗಳ್ಳತನ ಮಾಡುತ್ತಿದ್ದ ಮನೆಗಳ್ಳರನ್ನು ಬಂಧಿಸುವಲ್ಲಿ ದಾಬಸ್ ಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಬಸ್ ಪೇಟೆ ಹಳೇ ಸಂತೆ ಬೀದಿಯ ಛಾಯಾಶಂಕರ್ ಎಂಬುವರು ದಿನಾಂಕ 10/12/2020 ರಂದು ಮನೆಗೆ ಬೀಗ ಹಾಕಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಮತ್ತು ಹಿಂದೂಪುರದ ತಂಗಿ ಮನೆಗೆ ಹೋಗಿದ್ದರು. ಮನೆಯ ಹಿಂಬಾಗಿಲನ್ನು ಮೀಟಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಮನೆಗಳ್ಳತನ ಕುರಿತು ದಾಬಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ವಿದ್ಯಾರಣ್ಯಪುರದಲ್ಲಿ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬಂಧಿತ ಆರೋಪಿಗಳು ಎಂ.ಎಸ್ ಪಾಳ್ಯದ ಶೇಖ್ ಸಲ್ಮಾನ್ ಮತ್ತು ತಬರೇಜ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ 15 ಲಕ್ಷದ 8 ಸಾವಿರ ರೂ. ಮೌಲ್ಯದ 300 ಗ್ರಾಂ ಚಿನ್ನ, 1,420 ಗ್ರಾಂ ಬೆಳ್ಳಿ, 5 ವಾಚ್, 2 ಕ್ಯಾಮೆರಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶೇಖ್ ಸಲ್ಮಾನ್ ಸಹೋದರಿಯ ಮದುವೆಗಾಗಿ ಮನೆಗಳ್ಳತನ ಮಾಡುತ್ತಿದ್ದುದಾಗಿ ಬಾಯ್ಬಿಟ್ಟಿದ್ದಾನೆ. ಕದ್ದಿದ್ದ ಚಿನ್ನಾಭರಣಗಳನ್ನ ಶೇಖ್ ಸಲ್ಮಾನ್ ಸ್ನೇಹಿತ ತಬರೇಜ್ ಮೂಲಕ ಗಿರವಿ ಇಡುತ್ತಿದ್ದರು. ಟೀ ಕುಡಿಯುವ ನೆಪದಲ್ಲಿ ನಾಲ್ಕೈದು ದಿನ ಮನೆಯವರ ಚಲನವಲನ ಗಮನಿಸುತ್ತಾ ಮನೆಗಳ್ಳತನಕ್ಕೆ ಇಳಿಯುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.