ಬೆಂಗಳೂರು : ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ರೈತರಿಗೆ ಬರಬೇಕಾದ 91.99 ಕೋಟಿ ರೂ. ನೇರ ನಗದು ವರ್ಗಾವಣೆ ಮೂಲಕ (ಡಿಬಿಟಿ) ಪಾವತಿಯಾಗದೇ, ಮೂರು ವರ್ಷಗಳಿಂದ ಬಾಕಿ ಉಳಿದಿದೆ ಎಂಬುದು ಭಾರತ ಮಹಾ ಲೆಕ್ಕಪರಿಶೋಧಕರ ವರದಿಯಲ್ಲಿ (ಸಿಎಜಿ) ಬಹಿರಂಗವಾಗಿದೆ.
ಅಲ್ಲದೆ, ರಾಜ್ಯದ ಕ್ಷೀರಸಿರಿ ಯೋಜನೆಯ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆಯಲ್ಲಿ (ಡಿಬಿಟಿ) ಹಲವಾರು ನ್ಯೂನತೆಗಳಾಗಿದ್ದು, ಲಕ್ಷಾಂತರ ರೂ. ಬಾಕಿ ಉಳಿದಿವೆ. 2018-2020ರ ಅವಧಿಯ ಲೆಕ್ಕಪರಿಶೋಧನೆ ವರದಿಯನ್ನು ಇಂದು ವಿಧಾನಸಭೆಯಲ್ಲಿ ಸರ್ಕಾರ ಮಂಡಿಸಿತು. ರಾಜ್ಯದ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ವಿತರಿಸುವ ಪಶುಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆಯ ಕೋರ್ ಡಿಬಿಟಿ ಪೋರ್ಟಲ್ ಹಾಗೂ ಕ್ಷೀರಸಿರಿ ಅಪ್ಲಿಕೇಶನ್‍ಗಳ ಲೆಕ್ಕಪರಿಶೋಧನೆಯನ್ನು ನಡೆಸಲಾಯಿತು.
ಕ್ಷೀರಸಿರಿ ಯೋಜನೆ ಕಡತಗಳ ಅನುಮೋದನೆಯಲ್ಲಿನ ವಿಳಂಬದಿಂದಾಗಿ 8,464 ಹಾಲು ಉತ್ಪಾದಕರಿಗೆ 56.08 ಲಕ್ಷ ರೂ. ಪಾವತಿಯಾಗುವುದು ಬಾಕಿ ಉಳಿದಿತ್ತು. ಡಿಬಿಟಿ ಮೂಲಕ ನಡೆಸಿದ ಒಟ್ಟಾರೆ ವಹಿವಾಟುಗಳಲ್ಲಿ ಕೇವಲ ಶೇಕಡಾ 83ರಷ್ಟು ಮಾತ್ರ ಯಶಸ್ವಿಯಾಗಿದ್ದವು. ಶೇ. 14 ತಿರಸ್ಕೃತವಾಗಿದ್ದವು. ಇಂತಹ ವಿಫಲವಾದ ವಹಿವಾಟುಗಳನ್ನು ಸರಿಪಡಿಸಿ, ಪುನರಾರಂಭಿಸುವಲ್ಲಿ ಸಂಬಂಧಿಸಿದ ಇಲಾಖೆಗಳು ವಿಫಲವಾದವು. ಆದ್ದರಿಂದ 91,283 ವಹಿವಾಟುಗಳು ಪುನರಾರಂಭಕ್ಕೆ ಕಾಯುತ್ತ ಉಳಿಯಬೇಕಾಯಿತು. ಹೈನುಗಾರರು ಹಾಗೂ ಇತರ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಸದುದ್ದೇಶ ಕೆಲ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಯಿತು ಎಂಬುದು ವರದಿಯಲ್ಲಿ ಬಹಿರಂಗವಾಗಿದೆ.
ಇದನ್ನೂ ಓದಿ: ಪರಿಷತ್ನಲ್ಲಿ ಪ್ರತಿಧ್ವನಿಸಿದ ಪಶುಸಂಗೋಪನಾ ಇಲಾಖೆ ಅಕ್ರಮ ನೇಮಕಾತಿ ವಿಚಾರ: ಸದನದಲ್ಲಿ ಗದ್ದಲ
ಫಲಾನುಭವಿಗಳಿಗೆ ದೊರೆಯಬೇಕಾಗಿದ್ದ ಹಣ ಡಿಬಿಟಿ ಮೂಲಕ ಪಾವತಿಯಾಗಲಿಲ್ಲ. 2018-19 ಹಾಗೂ 2019-20ರ ಅವಧಿಯಲ್ಲಿ 6.67 ಲಕ್ಷ ಫಲಾನುಭವಿಗಳು ಡಿಬಿಟಿ ಮೂಲಕ ಹಣ ಬಾರದೇ ಸೌಲಭ್ಯದಿಂದ ವಂಚಿತರಾದರು. ಇದರ ಮೊತ್ತ 153.30 ಕೋಟಿಗಳಷ್ಟು ಎಂದು ವರದಿ ವಿವರಿಸಿದೆ.
ಸಂಬಂಧಿಸಿದ ಇಲಾಖೆಗಳು ಆಧಾರ್ ಅಧಿನಿಯಮ ಹಾಗೂ ಸಂಬಂಧಿಸಿದ ಸುತ್ತೋಲೆಗಳ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ನಡೆದುಕೊಂಡವು. ವಿವಿಧ ಯೋಜನೆಗಳ ಫಲಾನುಭವಿಗಳ ಕುಂದುಕೊರತೆ ಪರಿಹರಿಸುವುದಕ್ಕೆ ಡಿಬಿಟಿ ಕೋಶದಲ್ಲಿ ಸಾರ್ವಜನಿಕ ಕುಂದುಕೊರತೆ ಕೇಂದ್ರ ಆರಂಭಿಸಲಿಲ್ಲ ಎಂದಿದೆ. ಇದರಿಂದ ಸಮಸ್ಯೆ ಇನ್ನಷ್ಟು ಬಿಗಡಾಯಿಸಿತು ಎಂಬುದನ್ನು ಪರೋಕ್ಷವಾಗಿ ತಿಳಿಸಿದೆ.
ಡಿಬಿಟಿ ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಪೋರ್ಟಲ್‍ಗಳು ಹಾಗೂ ರೈತಸಿರಿ ಯೋಜನೆಗಳ ಮೌಲ್ಯಾಂಕನವನ್ನು ನಡೆಸಲಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ರೈತರಿಗೆ ಇರುವ ಸರ್ಕಾರದ ಯೋಜನೆಗಳಿವು: ನೀವೂ ಉಪಯೋಗ ಪಡೆದುಕೊಳ್ಳಿ