ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ವಿವಿಧ ನಿಗಮಗಳಿಗೆ ಒಟ್ಟು 857.5 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ರಾಜ್ಯ ಸರ್ಕಾರ ಹಂಚಿಕೆ ಮಾಡಿದೆ.
ಇದರಿಂದಾಗಿ ಈ ಎಲ್ಲ ಇಲಾಖೆಗಳಡಿ ಬರುವ 19 ನಿಗಮಗಳಲ್ಲಿ ವಿವಿಧ ಯೋಜನೆಗಳಿಗೆ 3172.13 ಕೋಟಿ ರೂ. ಅನುದಾನ ಒದಗಿಸಿದಂತಾಗಿದೆ. ಈ ಇಲಾಖೆಗಳಡಿ ಬರುವ ನಿಗಮಗಳಲ್ಲಿ ಒಟ್ಟು 1611.92 ಕೋಟಿ ರೂ. ಪ್ರಾರಂಭಿಕ ಶಿಲ್ಕು ಇದ್ದು, ಆಯ-ವ್ಯಯದಲ್ಲಿ ಒಟ್ಟು 563.52 ಕೋಟಿ ರೂ. ಒದಗಿಸಲಾಗಿದೆ.
ಇದರ ಜೊತೆಗೆ ಅನುಸೂಚಿತ ಜಾತಿ/ ಅನುಸೂಚಿತ ಪಂಗಡಗಳ ರಾಜ್ಯ ಪರಿಷತ್ತಿನ ಸಭೆಯಲ್ಲಿ ತೀರ್ಮಾನಿಸಿದಂತೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಗಳಡಿ ವಿವಿಧ ಅಭಿವೃದ್ಧಿ ಯೋಜನೆಯಡಿ 175.19 ಕೋಟಿ ರೂ. ಒದಗಿಸಲಾಗಿದೆ.
ಇದರೊಂದಿಗೆ ನಿಗಮಗಳ ಪ್ರಮುಖ ಯೋಜನೆಗಳಾದ ಗಂಗಾಕಲ್ಯಾಣ, ದ್ವಿಚಕ್ರ ವಾಹನ, ಭೂ ಒಡೆತನ, ಸ್ವಯಂ ಉದ್ಯೋಗ, ಮೈಕ್ರೋ ಕ್ರೆಡಿಟ್, ಅರಿವು ಶೈಕ್ಷಣಿಕ ಸಾಲ ಯೋಜನೆಗಳಿಗೆ ಹೆಚ್ಚಿಗೆ ಅರ್ಜಿಗಳು ಬರುವುದರಿಂದ ಹೆಚ್ಚಿನ ಜನರಿಗೆ ಅನುಕೂಲ ಕಲ್ಪಿಸಲು ಒಂದು ಬಾರಿಯ ನೆರವಿನ ರೂಪದಲ್ಲಿ ಈ ಎಲ್ಲ ನಿಗಮಗಳಿಗೆ ಒಟ್ಟು 857.5 ಕೋಟಿ ರೂ. ಹೆಚ್ಚುವರಿ ಅನುದಾನವನ್ನು ಒದಗಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೀಗಾಗಿ, ಎಲ್ಲ ನಿಗಮಗಳಿಗೂ ನಮ್ಮ ಸರ್ಕಾರ ಪ್ರಸಕ್ತ ಸಾಲಿಗೆ ಸಾಕಷ್ಟು ಅನುದಾನ ಒದಗಿಸಿದಂತಾಗಿದ್ದು, ಇದರಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪ ಸಂಖ್ಯಾತ ಜನಾಂಗದವರ ಸರ್ವತೋಮುಖ ಅಭಿವೃದ್ಧಿಯಾಗಲಿದೆ. ಈ ಎಲ್ಲಾ ಅನುದಾನದಲ್ಲಿ ನಿಗಮಗಳು ಈ ಸಾಲಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಿವೆ ಎಂದು ಸಿಎಂ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಓದಿ: ಈದ್ಗಾ ಮೈದಾನದಲ್ಲಿ ರಾಷ್ಟ್ರಧ್ವಜ ಹಾರಿಸುವ ಬಗ್ಗೆ ಟೀಕೆ - ಟಿಪ್ಪಣಿ ಮಾಡಲ್ಲ: ಬಿಎಸ್ವೈ