ಬೆಂಗಳೂರು : ರಾಜಧಾನಿ ಬೆಂಗಳೂರಿಗೆ ವೈದ್ಯಕೀಯ ಸೇವೆ ಪಡೆಯಲು ದೇಶ-ವಿದೇಶದಿಂದ ಲಕ್ಷಾಂತರ ಜನ ಬರುತ್ತಾರೆ. ಅದೆಷ್ಟೋ ಕಠಿಣ ಶಸ್ತ್ರಚಿಕಿತ್ಸೆಯನ್ನ ಸುಲಭವಾಗಿ ಇಲ್ಲಿನ ವೈದ್ಯರು ಮಾಡಿ ಮುಗಿಸಿ ಬಿಡ್ತಾರೆ. ಅಂದಹಾಗೇ, ವೈದ್ಯಕೀಯ ಸಾಧನೆಯಲ್ಲಿನ ಮತ್ತೊಂದು ಮೈಲಿಗಲ್ಲು ಎಂಬಂತೆ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರ ತಂಡ ವಿಶೇಷ ಶಸ್ತ್ರಚಿಕಿತ್ಸೆ ಮಾಡಿದೆ.
ಬಾಲ್ಯದಿಂದಲೂ ಬಾಹ್ಯ ನರಗಳ ಹಾನಿಕರವಲ್ಲದ ಗಡ್ಡೆಯಾದ 'ಪ್ಲೆಕ್ಸಿಫಾರ್ಮ್ ನ್ಯೂರೋಫೈಬ್ರೊಮಾ' ಎಂಬ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದ ಒಡಿಶಾದ ತಿತಿಲಘರ್‌ನ 31 ವರ್ಷದ ಮನ್ಬೋಧ್ ಬಾಗ್‌ನ ಮಖದ ಮೇಲೆ ನೇತಾಡುತ್ತಿದ್ದ ಗಡ್ಡೆಯನ್ನು ಆಸ್ಪರ್ ಸಿಎಂಐ ವೈದ್ಯರು ಯಶಸ್ವಿಯಾಗಿ ತೆಗೆದು ಹಾಕಿದ್ದಾರೆ.
ಎಂಟು ಕೆಜಿ ಬೆಳೆದಿದ್ದ ಗಡ್ಡೆ : ಮನ್ಬೋಧ್ ಬಾಗ್‌ನ ಮುಖದ ಮೇಲೆ ಕಾಣಿಸಿದ್ದ ಗಡ್ಡೆ, ವಯಸ್ಸಾದಂತೆ ಬೆಳೆದು, 8 ಕೆಜಿಗಿಂತಲೂ ಹೆಚ್ಚು ದೊಡ್ಡದಾಗಿತ್ತು. ಇದರಿಂದ ಕುರೂಪಿಯಾಗಿ ನಿತ್ಯ ಅವಮಾನ ಎದುರಿಸಬೇಕಾಯಿತು. ಗಡ್ಡೆಯನ್ನು ಭಾಗಶಃ ಕತ್ತರಿಸುವುದಕ್ಕಾಗಿ ಅನೇಕ ಆಸ್ಪತ್ರೆಗಳಿಗೆ ಭೇಟಿ ನೀಡಿದರು.
ಆದ್ರೆ, ಶಸ್ತ್ರಚಿಕಿತ್ಸೆ ವೇಳೆ ಅತಿಯಾದ ರಕ್ತಸ್ರಾವದ ಅಪಾಯದಿಂದಾಗಿ ಬದುಕುಳಿಯುವ ಅವಕಾಶವೂ ಕಡಿಮೆಯಾಗಿತ್ತು. ಇದರಿಂದಾಗಿ ವೈದ್ಯರು ಸರ್ಜರಿ ಮಾಡಲು ನಿರಾಕರಿಸುತ್ತಿದ್ದರು.
ಸವಾಲಾಗಿ ಸ್ವೀಕರಿಸಿದ ವೈದ್ಯರ ತಂಡ : ಈ ಮಧ್ಯೆ ಒಡಿಶಾದ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಈ ಪ್ರಕರಣವನ್ನು ಪರಿಶೀಲಿಸಿ ಶಸ್ತ್ರಚಿಕಿತ್ಸೆಗೆ ಪ್ರಯತ್ನಿಸಲಾಯಿತಾದರೂ, ರಕ್ತಸ್ರಾವದಿಂದಾಗಿ ನಂತರ ಕೈಬಿಡಲಾಯಿತು.
ನಂತರ, ನ್ಯೂಸ್ಲಿಯನ್ಸ್ ಮೀಡಿಯಾ ನೆಟ್‌ವರ್ಕ್ ಪ್ರೈವೇಟ್ ಲಿಮಿಟೆಡ್, ಮಿಲಾಪ್‌ನ ಸಹಯೋಗದೊಂದಿಗೆ ಕ್ರೌಂಡ್ ಫಂಡಿಂಗ್ ಪ್ರಯತ್ನದ ಮೂಲಕ ಹಲವು ಹಂತದ ಶಸ್ತ್ರಚಿಕಿತ್ಸೆಯನ್ನು ಅವನಿಗೆ ಒದಗಿಸಲು ಅನುಕೂಲ ಮಾಡಿಕೊಡಲಾಯಿತು. ನಂತರ, ಈತ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಗೆ ಚಿಕಿತ್ಸೆಗಾಗಿ ಭೇಟಿ ನೀಡಿದರು. ಅಲ್ಲಿ ಅವನ ಸ್ಥಿತಿ ವಿಸ್ತೃತವಾಗಿ ಪರಿಶೀಲಿಸಿ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಲಾಯಿತು.
16 ವಿವಿಧ ಶಸ್ತ್ರ ಚಿಕಿತ್ಸೆ : ನರಶಸ್ತ್ರಚಿಕಿತ್ಸೆ, ಪ್ಲಾಸ್ಟಿಕ್ ಸರ್ಜರಿ, ಆಂಕೊಲಾಜಿ, ಇಎನ್‌ಟಿ, ನರ-ಅರಿವಳಿಕೆ ಮತ್ತು ನೇತ್ರಶಾಸ್ತ್ರ ಸೇರಿ ವಿವಿಧ ವಿಭಾಗಗಳ ತಜ್ಞರನ್ನು ಒಳಗೊಂಡ ಆಸ್ಟರ್ ಸಿಎಂಐ ವೈದ್ಯರ ತಂಡದಿಂದ ಗಡ್ಡೆಯನ್ನು ತೆಗೆದು ಹಾಕಲು ಮನ್ಬೋಧ್ ಆರು ತಿಂಗಳ ಅವಧಿಯಲ್ಲಿ 16 ವಿವಿಧ ಶಸ್ತ್ರಚಿಕಿತ್ಸಾ ವಿಧಾನಗಳಿಗೆ ಒಳಗಾಗಬೇಕಾಯಿತು.
ಬೃಹತ್ ಗಡ್ಡೆ ಮುಖ, ತಲೆ ಮತ್ತು ಕುತ್ತಿಗೆಯ ಬಲಭಾಗದಲ್ಲಿತ್ತು. ಬಲ ಕಣ್ಣುಗೂಡಿಗೆ ನುಸುಳಿ ಸಂಪೂರ್ಣ ಆವರಿಸಿತ್ತು. ಇದು ಶಸ್ತ್ರಚಿಕಿತ್ಸೆಯ ಮೂಲಕ ತೆಗೆದು ಹಾಕುವ ಪ್ರಕ್ರಿಯೆ ಕಷ್ಟಕರ ಮತ್ತು ಅಪಾಯಕಾರಿ ಆಗಿಸಿತ್ತು.
ದೀರ್ಘ ಶಸ್ತ್ರ ಚಿಕಿತ್ಸೆ ಕುರಿತು ವೈದ್ಯರ ಮಾತು : ಈ ಕುರಿತು ಆಸ್ಟತ್ರೆಯ ನರಶಸ್ತ್ರಚಿಕಿತ್ಸೆಯ ಹಿರಿಯ ತಜ್ಞ ಮತ್ತು ನರವಿಜ್ಞಾನದ ಮುಖ್ಯಸ್ಥ ಡಾ. ರವಿ ಗೋಪಾಲ್ ವರ್ಮಾ ಮಾತನಾಡಿ, ಮನ್ಬೋಧ್ ತನ್ನ ತಲೆಯಿಂದ ಕುತ್ತಿಗೆಯವರೆಗೆ ವಿಸ್ತಾರವಾದ ಗಡ್ಡೆಯೊಂದಿಗೆ ನಮ್ಮ ಬಳಿಗೆ ಬಂದರು. ಹಲವು ಶಸ್ತ್ರಚಿಕಿತ್ಸೆಯ ಬಳಿಕ ಗಡ್ಡೆಯನ್ನು ನಿಷ್ಕ್ರಿಯ ಎಂದು ಪರಿಗಣಿಸಲಾಯಿತು.
ರಕ್ತಸ್ರಾವವನ್ನು ಕಡಿಮೆ ಮಾಡಲು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ನಾವು ಪ್ರಿಯೋಪ್ ಟ್ಯೂಮರ್ ಎಂಬೋಲೈಸೇಶನ್‌ಗಾಗಿ ಯೋಜಿಸಿದ್ದೆವು. ಡಿಎಸ್‌ಎ ಆಂಜಿಯೋಗ್ರಾಮ್ ಮುಖದ ಅಪಧಮನಿ, ಆಂತರಿಕ ಹಾಗೂ ಬಾಹ್ಯ ತಾತ್ಕಾಲಿಕ ಅಪಧಮನಿ ಮತ್ತು ನೇತ್ರ ಅಪಧಮನಿಯ ಬಹು ಅಂಗಗಳಿಂದ ಒದಗಿಸಲಾದ ಗಮನಾರ್ಹ ಗಡ್ಡೆಯ ಬ್ಲಶ್ ಅನ್ನು ತೋರಿಸಿದೆ.
ಆ ಬಹು ಅಂಗಗಳ ಸೂಪರ್ ಸೆಲೆಕ್ಟೀವ್ ಕ್ಯಾತಿಟೆರೈಸೇಶನ್ ಮತ್ತು ಟ್ಯೂಮರ್ ಎಂಬೋಲೈಸೇಶನ್ ಅನ್ನು ಪಿವಿಎ ಕಣಗಳನ್ನು ಬಳಸಿ ಮಾಡಲಾಯಿತು. ಅಂತಿಮ ಆಂಜಿಯೋಗ್ರಾಮ್ ಗಡ್ಡೆಯ ಬ್ಲಶ್‌ನಲ್ಲಿ ಗಮನಾರ್ಹ ಇಳಿಕೆಯನ್ನು ತೋರಿಸಿದೆ. ಇದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ರಕ್ತಸ್ರಾವವನ್ನು ಕಡಿಮೆ ಮಾಡಿತು ಅಂತಾ ವಿವರಿಸಿದರು.
ತಂಡಕ್ಕೆ ಅಂತಿಮವಾಗಿ ಗಡ್ಡೆಯನ್ನು ತೆಗೆದು ಹಾಕಲು ಮತ್ತು ಮುಖದ ಮೂಳೆಯನ್ನು ಪುನಃ ಸ್ಥಾಪಿಸಲು ಸಾಧ್ಯವಾಯಿತು. ಇದು ಆಸ್ಟರ್ ಸಿಎಂಐಯಲ್ಲಿನ ಅತ್ಯಂತ ನುರಿತ ವೈದ್ಯರ ಪ್ರಯತ್ನದ ಫಲ. ಜೊತೆಗೆ ಇದಕ್ಕೆ ಸುರಕ್ಷಿತ ಶಸ್ತ್ರಚಿಕಿತ್ಸೆಗೆ ಅಗತ್ಯ ಅತ್ಯಾಧುನಿಕ ಮೂಲಸೌಕರ್ಯ ಮತ್ತು ವಿಶ್ವ ದರ್ಜೆಯ ವೈದ್ಯಕೀಯ ಉಪಕರಣಗಳ ಸಹಾಯವೂ ದೊರೆಯಿತು ಎಂದರು.
ಸದ್ಯ ಆಸ್ಟರ್ ಸಿಎಂಐ ಆಸ್ಪತ್ರೆಯ ವೈದ್ಯರ ತಂಡದ ಪರಿಶ್ರಮದಿಂದ ಮನ್ಬೋಧ್ ಈಗ ಗಡ್ಡೆಯಿಲ್ಲದ ಜೀವನ ಸಾಗಿಸುತ್ತಿದ್ದಾರೆ ಮತ್ತು ಚಿಕಿತ್ಸೆಯ ನಂತರ ಬಹಳ ಬೇಗನೆ ಚೇತರಿಸಿಕೊಂಡಿದ್ದಾರೆ. ಯಾವುದೇ ತೊಂದರೆಗಳಿಲ್ಲದೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ಮುಖದಲ್ಲಿ ದೊಡ್ಡ ನಗುವಿನೊಂದಿಗೆ ತಮ್ಮ ಊರಿಗೆ ಮರಳಿದ್ದಾರೆ.