ಬೆಂಗಳೂರು: ಅಹಿಂಸೆ, ಶಾಂತಿ, ಸೌಹಾರ್ದತೆ, ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿರುವ ಈ ದೇಶದಲ್ಲಿ ಧರ್ಮ, ಜಾತಿ, ವರ್ಣದ ವಿಷ ಬೀಜ ಭಿತ್ತಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಅಂದಿನ ಸ್ವಾತಂತ್ರ್ಯ ಸಂಗ್ರಾಮ ಬ್ರಿಟಿಷರ ವಿರುದ್ಧ ನಡೆದಿತ್ತು, ಇಂದಿನ ಸಂಗ್ರಾಮ ಕೋಮುವಾದಿ ಶಕ್ತಿಗಳ ವಿರುದ್ಧ ನಡೆಯಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕರೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಭಾಷಣ ಮಾಡಿದ ಅವರು, ಅಂದು ಕಾಂಗ್ರೆಸ್ ನೇತೃತ್ವದಲ್ಲಿ ದೇಶವೇ ಒಂದಾಗಿತ್ತು, ಇಂದು ಕಾಂಗ್ರೆಸ್ ನೇತೃತ್ವದಲ್ಲಿ “ಇಂಡಿಯಾ” ಒಂದಾಗಿದೆ. ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಮೊದಲು ಕ್ರಾಂತಿಯ ಕಿಚ್ಚು ಹಚ್ಚಿದ್ದೇ ಕರ್ನಾಟಕ. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ವೇದಿಕೆಯಾಗಿದ್ದ ಕರ್ನಾಟಕದಲ್ಲೇ ಈಗ ಹೊಸ "ಇಂಡಿಯಾ" ಕೂಡ ಉದಯವಾಗಿದೆ. ಈ ಇಂಡಿಯಾಗೆ ಶಕ್ತಿ ತುಂಬಿ ದೇಶವನ್ನು ರಕ್ಷಣೆ ಮಾಡಿಕೊಳ್ಳುವ ಮಹತ್ತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಎಂದರೆ ಬೆಲೆ ಕಟ್ಟಿ ಪಡೆಯುವ ವಸ್ತುವಲ್ಲ. ಅದು ಬದುಕಿನ ಉಸಿರು. ಹೀಗಾಗಿ ಸ್ವಾತಂತ್ರ್ಯಕ್ಕೆ ನಾವು ಬೆಲೆ ಕಟ್ಟಲು ಸಾಧ್ಯವೇ?” ಎಂದು ಮಹಾತ್ಮ ಗಾಂಧಿ ಹೇಳಿದ್ದರು. ಮಹಾತ್ಮಾ ಗಾಂಧಿ, ಜವಹರಲಾಲ್ ನೆಹರೂ, ಮೌಲಾನ ಅಜಾದ್, ಭಗತ್ ಸಿಂಗ್, ವಲ್ಲಭಬಾಯ್ ಪಟೇಲ್, ಡಾ. ಬಿ. ಆರ್. ಅಂಬೇಡ್ಕರ್, ಸರೋಜಿನಿ ನಾಯ್ಡು ಅವರ ಹೋರಾಟದ ಫಲವಾಗಿ ನಾವು ಸ್ವಾತಂತ್ರ್ಯ ಭಾರತದ ಫಲಾನುಭವಿಗಳಾಗಿದ್ದೇವೆ. ಈ ದೇಶಕ್ಕೆ ಸ್ವಾತಂತ್ರ್ಯ ತಂದದ್ದು, ದೇಶ ಕಟ್ಟಿದ್ದು, ಅಭಿವೃದ್ಧಿಯ ಪಥದಲ್ಲಿ ದೇಶವನ್ನು ನಿಲ್ಲಿಸಿದ್ದು ಕಾಂಗ್ರೆಸ್ ಪಕ್ಷ. ಸ್ವಾತಂತ್ರ್ಯ ಎಂದರೆ ಅದು ಕೇವಲ ರಾಜಕೀಯ ನಿರ್ಧಾರವೂ ಅಲ್ಲ ಅಥವಾ ಹೊಸ ಸಂವಿಧಾನವಲ್ಲ. ಇದು ಮನಸ್ಸು ಹಾಗೂ ಹೃದಯಕ್ಕೆ ಸಂಬಂಧಿಸಿದ್ದು. ಒಂದು ವೇಳೆ ಮನಸ್ಸು ಸಂಕುಚಿತವಾಗಿದ್ದರೆ ಅಥವಾ ಗೊಂದಲದಲ್ಲಿದ್ದರೆ, ಹೃದಯ ಅಸೂಯೆ ಅಥವಾ ದ್ವೇಷದಿಂದ ತುಂಬಿದ್ದರೆ ಅಲ್ಲಿ ಸ್ವಾತಂತ್ರ್ಯ ಎಂಬುದು ಅಸ್ತಿತ್ವದಲ್ಲಿರುವುದಿಲ್ಲ ಎಂದು ನೆಹರು ಹೇಳಿದ್ದರು.
ಇಂದು ನಾವು ಬರೀ ಧ್ವಜ ಹಾರಿಸಿ ರಾಷ್ಟ್ರಗೀತೆ ಹಾಡಿದರೆ ಸಾಲದು. ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ ಎಂದು ಅರಿಯಬೇಕಿದೆ. ಮಣಿಪುರದಲ್ಲಿ ಮಾರಣ ಹೋಮ, ಹರಿಯಾಣದ ಗಲಭೆ, ಉತ್ತರ ಪ್ರದೇಶದ ಲಿಂಚಿಂಗ್ ನೋಡಿದರೆ ನಮ್ಮ ದೇಶದ ಸ್ವಾತಂತ್ರ್ಯ ಏನಾಗಿದೆ? ಅದು ಯಾರ ಕೈಯಲ್ಲಿ ನಲುಗುತ್ತಿದೆ ಎಂದು ತಿಳಿಯುತ್ತದೆ. ಸ್ವಾತಂತ್ರ್ಯದ ಮೂಲ ಗುರಿಯಾದ ಐಕ್ಯತೆ, ಸಮಗ್ರತೆ, ಸಹಬಾಳ್ವೆ, ಕೋಮು ಸೌಹಾರ್ದತೆ ಇಂದು ದಿಕ್ಕಾಪಾಲಾಗಿದೆ. ಅವರಿಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ. ಏಕೆಂದರೆ ಅದಕ್ಕಾಗಿ ಹೋರಾಡಿದ ಇತಿಹಾಸ ಆ ಪಕ್ಷಕ್ಕಿಲ್ಲ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
1837 ರಲ್ಲಿ ನಡೆದ ಅಮರ ಸುಳ್ಯ ಹೋರಾಟ ಈ ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮ. 13 ದಿನಗಳ ಕಾಲ ಮಂಗಳೂರು ಸೇರಿದಂತೆ ಒಂದಷ್ಟು ಭಾಗಗಳನ್ನು ಹೋರಾಟಗಾರರು ಹಿಡಿತದಲ್ಲಿ ಇಟ್ಟು ಕೊಂಡಿದ್ದರು. ದುರಾದೃಷ್ಟವಶಾತ್ ಅಕ್ಟೋಬರ್ 31, 1837 ರಂದು ಈ ದಂಗೆಯ ಪ್ರಮುಖ ಹೋರಾಟಗಾರರನ್ನು ಗಲ್ಲಿಗೇರಿಸಲಾಯಿತು. ಶಿವಮೊಗ್ಗ ಜಿಲ್ಲೆಯ ಈಸೂರು ಸ್ವಾತಂತ್ರ್ಯವನ್ನು ಘೋಷಿಸಿದ ದೇಶದ ಮೊದಲ ಗ್ರಾಮ. ಏಪ್ರಿಲ್ 25, 1938 ರಂದು ವಿದುರಾಶ್ವಥದಲ್ಲಿ ನಡೆದ ಗೋಲಿಬಾರ್ ಅನ್ನು ದಕ್ಷಿಣ ಭಾರತದ ಜಲಿಯನ್ ವಾಲಾಭಾಗ್ ಹತ್ಯಾಕಾಂಡ ಎನ್ನಬಹುದು. ಕಾಂಗ್ರೆಸ್ ಮುಖಂಡ ಹನುಮಂತ ರಾವ್ ಅವರ ನೇತೃತ್ವದಲ್ಲಿ 1930 ರಲ್ಲಿ ಅಂಕೋಲಾದಲ್ಲಿ ಉಪ್ಪಿನ ಸತ್ಯಾಗ್ರಹ ನಡೆದಿತ್ತು ಎಂದು ಡಿಕೆಶಿ ಸ್ಮರಿಸಿದರು.
ತಮಿಳುನಾಡಿಗೆ 10 ಟಿಎಂಸಿ ನೀರು ಬಿಡಲು ನಾವು ಬದ್ಧರಿದ್ದೇವೆ: ಕಾವೇರಿ ನೀರಿಗಾಗಿ ತಮಿಳುನಾಡು ತಗಾದೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ತಮಿಳುನಾಡು ಸರ್ಕಾರ ಕೋರ್ಟ್ ಮೊರೆ ಹೋಗಿದೆ. ನಾವು ಈಗಾಗಲೇ ಎಷ್ಟು ನೀರು ಬಿಡಬೇಕೋ ಅಷ್ಟು ಬಿಡುವಂತೆ ಹೇಳಿದ್ದೇವೆ. ಈಗಲೂ ತಮಿಳುನಾಡು ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಕಳೆದ ಬಾರಿ 400 ಟಿಎಂಸಿ ನೀರು ಸಮುದ್ರಕ್ಕೆ ಹೋಗಿದೆ. ನೀರು ಬಂದರೆ ನಾವು ಬಿಡಲು ತಯಾರಿದ್ದೇವೆ. ಮೇಕೆದಾಟು ಅಣೆಕಟ್ಟು ಕಟ್ಟಿದರೆ ನಿಮಗೂ ಅನುಕೂಲವಾಗಲಿದೆ. ಅದಕ್ಕೂ ನೀವು ಅವಕಾಶ ಕೊಡುತ್ತಿಲ್ಲ. ನಿಮಗೆ ನಾನು ಮನವಿ ಮಾಡುತ್ತೇನೆ. ನಿಮ್ಮ ಅನುಕೂಲಕ್ಕಾಗಿ ಮೇಕೆದಾಟು ಯೋಜನೆ ಎಂದು ಮನವಿ ಮಾಡಿದರು.
ಇದನ್ನೂ ಓದಿ: CM siddaramaiah: ಅನ್ನಬ್ರಹ್ಮ ರೈತ, ಸುಭದ್ರ ಕರ್ನಾಟಕದ ಅಭಿವೃದ್ಧಿಯೇ ಗುರಿ: ಸಿಎಂ ಸಿದ್ದರಾಮಯ್ಯ