ಆನೇಕಲ್: ಅತ್ತಿಬೆಲೆ ಕೈಗಾರಿಕಾ ಪ್ರದೇಶದಲ್ಲಿನ ಲೇಕ್ ಕೆಮಿಕಲ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಮಧ್ಯಾಹ್ನ ಊಟದ ವೇಳೆ ಬಾಯ್ಲರ್ ಸ್ಫೋಟಗೊಂಡಿದೆ. ಈ ಸಂದರ್ಭದಲ್ಲಿ ಕೆಲವರಿಗೆ ಸಣ್ಣಪುಣ್ಣ ಗಾಯಗಳಾಗಿದೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ಸಿಬ್ಬಂದಿ ಕಾರ್ಖಾನೆಯಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಸ್ಫೋಟದ ತೀವ್ರತೆಗೆ ಕಾರ್ಖಾನೆಯಲ್ಲಿ ಒಂದು ಕೋಟಿಗೂ ಅಧಿಕ ಮೊತ್ತದ ವಸ್ತುಗಳು ಬೆಂಕಿಗಾಹುತಿಯಾಗಿವೆ ಎಂದು ಅಂದಾಜಿಸಲಾಗಿದೆ. 33 ವರ್ಷಗಳ ಹಿಂದೆ ಸ್ಥಾಪನೆಗೊಂಡಿರುವ ಕಾರ್ಖಾನೆ ಇದಾಗಿದೆ. ಇಲ್ಲಿಯವರೆಗೆ ಈ ಕಾರ್ಖಾನೆಯಲ್ಲಿ ನಾಲ್ಕು ಬಾರಿ ಬಾಯ್ಲರ್ ಸ್ಫೋಟಗೊಂಡಿದೆ. ಇಲ್ಲಿ ಬಲ್ಕ್ ಡ್ರಗ್ ಕಚ್ಚಾ ಕೆಮಿಕಲ್ ತಯಾರಿಸುತ್ತಿದ್ದು, ಮುಖ್ಯ ಕಾರ್ಖಾನೆಗಳಿಗೆ ರವಾನಿಸಲಾಗುತ್ತಿತ್ತು.
ಅತ್ತಿಬೆಲೆ ವಡ್ಡರಪಾಳ್ಯದ ಜನತೆ ಕಾರ್ಖಾನೆ ಹೊರಸೂಸುವ ದುರ್ನಾತ ಹಾಗೂ ಶಬ್ದ ಮಾಲಿನ್ಯದಿಂದ ಬೇಸತ್ತು ಕಾರ್ಖಾನೆ ಸ್ಥಳಾಂತರಕ್ಕೆ ನೂರಾರು ಅರ್ಜಿಗಳನ್ನು ಕೊಟ್ಟಿದ್ದರು. ಆದ್ರೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಕೋವಿಡ್ ಸಾವಿಗೆ ಕಾಂಗ್ರೆಸ್ ನೇರ ಕಾರಣ ; ವಿಧಾನಸಭೆ ಕಲಾಪದಲ್ಲಿ ಸಚಿವ ಸುಧಾಕರ್ ಆರೋಪ