ಬೆಂಗಳೂರು : ಸ್ಕೂಟಿಯಲ್ಲಿ ಪ್ರಯಾಣಿಸುವಾಗ ನಗರದಲ್ಲಿ ಮಾಡಿದ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಸಂಬಂಧ ದಂಡ ವಿಧಿಸಿದ ಹಣದಲ್ಲಿ ಪ್ರಾಯಶಃ ಮೂರು ದ್ವಿಚಕ್ರ ವಾಹನಗಳನ್ನ ಕೊಂಡುಕೊಳ್ಳಬಹುದಾಗಿತ್ತು. ಅಷ್ಟರ ಮಟ್ಟಿಗೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವುದು ಬೆಳಕಿಗೆ ಬಂದಿದೆ.
ಬಹುತೇಕ ಹೆಲ್ಮೆಟ್ ರಹಿತ ಚಾಲನೆ ಸೇರಿ ವಿವಿಧ ಸಂಚಾರ ನಿಯಮ ಉಲ್ಲಂಘನೆಯಡಿ ಕಳೆದ ಎರಡು ವರ್ಷಗಳಿಂದ 643 ಬಾರಿ ಟ್ರಾಫಿಕ್ ವೈಯಲೇಷನ್ ಮಾಡಿದ್ದಾರೆ. ಟ್ರಾಫಿಕ್ ವೈಯಲೇಷನ್ ಕೇಸ್ಗಳಿಂದ 643 ಪ್ರಕರಣ ದಾಖಲಾಗಿದ್ದು, 3.22 ಲಕ್ಷ ದಂಡ ವಿಧಿಸಲಾಗಿದೆ. KA04KF9072 ನಂಬರ್ನ ಸ್ಕೂಟಿಯಿಂದ ಸಂಚಾರ ನಿಯಮ ಉಲ್ಲಂಘನೆಯಾಗಿದೆ. ಗಂಗಾನಗರದ ನಿವಾಸಿಯೊಬ್ಬರ ಹೆಸರಿನಲ್ಲಿದ್ದ ದ್ವಿಚಕ್ರ ವಾಹನ ಇದಾಗಿದೆ.
ಕಳೆದ ಎರಡು ವರ್ಷಗಳಿಂದ ಇದೇ ಸ್ಕೂಟಿ ಬಳಸಿಕೊಂಡು ಬೇರೆ - ಬೇರೆ ವ್ಯಕ್ತಿಗಳು ವಾಹನ ಚಲಾಯಿಸಿ ದಂಡ ಬೀಳಲು ಕಾರಣರಾಗಿದ್ದಾರೆ. ಇತ್ತೀಚಿನ ತಿಂಗಳಲ್ಲಿ ಪೊಲೀಸರು ರಸ್ತೆಯಲ್ಲಿ ನಿಂತು ದಂಡ ವಸೂಲಿ ಅಥವಾ ಕೇಸ್ ದಾಖಲಿಸುವ ಪದ್ದತಿಗೆ ತಿಲಾಂಜಲಿ ಹಾಕಿದ್ದು, ಬದಲಾಗಿ ನಗರದ ಬಹುತೇಕ ಜಂಕ್ಷನ್ಗಳಲ್ಲಿ ಅಳವಡಿಸಿದ ಅತ್ಯಾಧುನಿಕ ಕ್ಯಾಮರಗಳಲ್ಲಿ ನಿಯಮ ಉಲ್ಲಂಘಿಸಿದವರ ಭಾವಚಿತ್ರ ಸೆರೆ ಹಿಡಿದು, ಇದರ ಆಧಾರದ ಮೇರೆಗೆ ಡಿಜಿಟಲ್ ಪ್ರಕರಣಗಳನ್ನ ದಾಖಲಿಸಿಕೊಳ್ಳಲಾಗುತ್ತಿದೆ. ಆರ್. ಟಿ ನಗರ, ತರಳುಬಾಳು ಸೇರಿ ಸುತ್ತಮುತ್ತಲಿನ ರಸ್ತೆಗಳಲ್ಲಿ 643 ಬಾರಿ ಸಂಚಾರ ನಿಯಮ ಉಲ್ಲಂಘಿಸಲಾಗಿದೆ ಎಂಬುದು ತಿಳಿದುಬಂದಿದೆ.
ವಾಹನ ಸವಾರರ ವಿರುದ್ದದ ಕ್ರಿಮಿನಲ್ ಕೇಸ್ಗಳ ವಿವರ : ತಂತ್ರಜ್ಞಾನ ಬಳಸಿ ಸಂಚಾರ ನಿಯಮ ಉಲ್ಲಂಘಿಸುತ್ತಿರುವ ವಾಹನ ಸವಾರರ ವಿರುದ್ಧ ಸಂಪರ್ಕ ರಹಿತವಾಗಿ ಪ್ರಕರಣ ದಾಖಲಿಸಿಕೊಳ್ಳುತ್ತಿರುವ ಸಂಚಾರ ಪೊಲೀಸರು ಒನ್ ವೇ ಸಂಚಾರ, ನೋ ಪಾರ್ಕಿಂಗ್, ಫುಟ್ ಪಾತ್ಗಳಲ್ಲಿ ಪಾರ್ಕಿಂಗ್ ಹಾಗೂ ಪಾದಚಾರಿ ರಸ್ತೆಗಳಲ್ಲಿ ವಾಹನ ನಿಲ್ಲಿಸಿದ್ದ ಸವಾರರ ವಿರುದ್ಧ ಕಳೆದ ಆರು ತಿಂಗಳಲ್ಲಿ 5,280 ಕ್ರಿಮಿನಲ್ ಕೇಸ್ (ಜುಲೈ 12-2023) ದಾಖಲಿಸಿಕೊಂಡಿದ್ದರು.
ಸಂಚಾರ ದಟ್ಟಣೆ ನಿಯಂತ್ರಿಸಲು ಹಾಗೂ ನಿಯಮ ಉಲ್ಲಂಘಿಸುವ ವಾಹನ ಸವಾರರಿಗೆ ದಂಡದ ಬಿಸಿ ಮುಟ್ಟಿಸಲು ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡಿರುವ ಸಂಚಾರ ಪೊಲೀಸರು, ಅತ್ಯಾಧುನಿಕ ಕ್ಯಾಮರಾಗಳ ಮೂಲಕ ಸಂಪರ್ಕರಹಿತವಾಗಿ ಉಲ್ಲಂಘನಾ ಪ್ರಕರಣ ದಾಖಲಿಸಿಕೊಂಡಿದ್ದರು. ಆದಾಗ್ಯೂ ನಗರದಲ್ಲಿ ನೋ ಎಂಟ್ರಿಯಲ್ಲಿ ವಾಹನ ಸಂಚಾರ, ನೋ ಪಾರ್ಕಿಂಗ್ ಹಾಗೂ ಫುಟ್ ಪಾತ್ನಲ್ಲಿ ವಾಹನ ಸಂಚಾರದಿಂದಾಗಿ ಇತ್ತೀಚಿನ ದಿನಗಳಲ್ಲಿ ಅಪಘಾತಗಳು ಹೆಚ್ಚಾಗಿದ್ದವು. ಕಳೆದ ಆರು ತಿಂಗಳಲ್ಲಿ ಸಂಭವಿಸಿದ 2,354 ಅಪಘಾತಗಳಲ್ಲಿ 414 ಮಂದಿ ಬಲಿಯಾಗಿದ್ದರು. 2096 ವಾಹನ ಸವಾರರು ಗಾಯಗೊಂಡಿದ್ದರು. ಪ್ರತಿ ತಿಂಗಳು ಸರಾಸರಿ 70 ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿರುವುದು ಕಳವಳಕಾರಿಯಾಗಿದೆ.
ಇದನ್ನೂ ಓದಿ : Traffic rules violation: ಸಂಚಾರ ನಿಯಮ ಉಲ್ಲಂಘನೆ.. ವಾಹನ ಸವಾರರ ವಿರುದ್ಧ ಪೊಲೀಸರು ದಾಖಲಿಸಿಕೊಂಡಿರುವ ಕ್ರಿಮಿನಲ್ ಕೇಸ್ಗಳ ವಿವರ