ಬೆಂಗಳೂರು: ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿದ್ದ 63 ವರ್ಷದ ವೃದ್ಧರೊಬ್ಬರಿಗೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ನಗರದ ನಿವಾಸಿ ಎಚ್. ರಾಚಪ್ಪ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾ. ಜಿ. ಅಶೋಕ್ ನಿಜಗಣ್ಣನವರ್ ಅವರಿದ್ದ ಪೀಠ ಈ ಆದೇಶ ಮಾಡಿದೆ. ಪೀಠ ತನ್ನ ಆದೇಶದಲ್ಲಿ, ಆರೋಪಿ ರಾಚಪ್ಪ ವಯೋವೃದ್ಧರಾಗಿದ್ದು, ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಬಹುದು ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ, ಪ್ರಕರಣದ ಮತ್ತೊರ್ವ ಆರೋಪಿ ರಾಚಪ್ಪ ಪುತ್ರಿಗೂ ಜಾಮೀನು ಮಂಜೂರು ಮಾಡಿದೆ.
ಅಲ್ಲದೇ, ಆರೋಪಿಗಳು 15 ದಿನಗಳಲ್ಲಿ ತನಿಖಾಧಿಕಾರಿ ಮುಂದೆ ಹಾಜರಾಗಬೇಕು. ಇಬ್ಬರೂ ತಲಾ ಒಂದು ಲಕ್ಷ ರೂ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಒಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ರಾಚಪ್ಪ ಪುತ್ರ ಈರಣ್ಣನೊಂದಿಗೆ ಶೈಲಾ ಎಂಬಾಕೆ 2018ರ ಜ.21ರಂದು ಮದುವೆಯಾಗಿದ್ದರು. ಆದರೆ, 2021ರ ಫೆ.26ರಂದು ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಈ ಸಂಬಂಧ ಮೃತರ ಸೋದರ ಶೇಖಪ್ಪ, ನಗರದ ವೈಯಾಲಿ ಕಾವಲ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಆರೋಪ ಮಾಡಿ ದೂರು ದಾಖಲಿಸಿದ್ದರು.
ದೂರಿನಲ್ಲಿ, ತವರು ಮನೆಯಿಂದ 5 ಲಕ್ಷ ರೂ. ವರದಕ್ಷಿಣೆ ತರುವಂತೆ ಶೈಲಾಗೆ ಮಾವ ರಾಚಪ್ಪ ಮತ್ತು ನಾದಿನಿ ಪ್ರೇಮ ಪೀಡಿಸುತ್ತಿದ್ದರು. ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಿದ್ದರು. ಇದರಿಂದಲೇ ಶೈಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದರು. ಆದರಂತೆ ಪೊಲೀಸರು, ರಾಚಪ್ಪ ಮತ್ತು ಪ್ರೇಮ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ, ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಎಫ್ಐಆರ್ ದಾಖಲಿಸಿದ್ದರು. ಈ ಹಿನ್ನೆಲೆ ಬಂಧನ ಭೀತಿಗೆ ಒಳಗಾಗಿದ್ದ ಆರೋಪಿಗಳು ನಿರೀಕ್ಷಣಾ ಜಾಮೀನು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: ಹಗ್ಗ ಹರಿಯುತ್ತಿಲ್ಲ, ಕೋಲು ಮುರಿಯುತ್ತಿಲ್ಲ.. ಮುಷ್ಕರದ ನಡುವೆ ಸರ್ಕಾರದಿಂದ ಪರ್ಯಾಯ ವ್ಯವಸ್ಥೆಯ ಅಸ್ತ್ರ..