ದೇವನಹಳ್ಳಿ: ಬ್ರಿಟನ್ನಿಂದ ಎರಡನೇ ವಿಮಾನ ಇಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ. ಇದರಲ್ಲಿದ್ದ 226 ಪ್ರಯಾಣಿಕರಲ್ಲಿ ಐವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಪಾಸಿಟಿವ್ ಬಂದ 5 ಜನರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬ್ರಿಟನ್ನಲ್ಲಿ ಕೊರೊನಾ ವೈರಸ್ನ ಎರಡನೇ ಅಲೆ ಶುರುವಾದ ಹಿನ್ನೆಲೆ ಯುಕೆ-ಭಾರತ ನಡುವಿನ ವಿಮಾನಯಾನ ರದ್ದು ಮಾಡಲಾಗಿತ್ತು. ನಿನ್ನೆಯಿಂದ ಬ್ರಿಟನ್ ಮತ್ತು ಭಾರತದ ನಡುವಿನ ವಿಮಾನಯಾನ ಪ್ರಾರಂಭವಾಗಿದೆ.
ಈ ಹಿನ್ನೆಲೆ ನಿನ್ನೆ ಮುಂಜಾನೆ 4:30ಕ್ಕೆ ಯುಕೆಯಿಂದ ಮೊದಲ ವಿಮಾನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಇದರಲ್ಲಿ ಒಟ್ಟು 289 ಪ್ರಯಾಣಿಕರು ಆಗಮಿಸಿದರು. ಇವರೆಲ್ಲರನ್ನೂ ಕೊರೊನಾ ಪರೀಕ್ಷೆಗೊಳಪಡಿಸಿದಾಗ ಒಬ್ಬರಿಗೆ ಮಾತ್ರ ಕೊರೊನಾ ಪಾಸಿಟಿವ್ ವರದಿ ಬಂದಿದ್ದು, ಇನ್ನುಳಿದ ಎಲ್ಲಾ ಪ್ರಯಾಣಿಕರಿಗೆ ನೆಗೆಟಿವ್ ವರದಿ ಬಂದಿದೆ.
ಇಂದು ಯುಕೆಯಿಂದ 2ನೇ ವಿಮಾನ ಬೆಳಗ್ಗೆ 5 ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಇದರಲ್ಲಿ ಒಟ್ಟು 226 ಪ್ರಯಾಣಿಕರು ಆಗಮಿಸಿದ್ದಾರೆ. 11 ಸಿಬ್ಬಂದಿ, 123 ಪುರುಷರು, 81 ಮಹಿಳೆಯರು ಮತ್ತು 22 ಮಕ್ಕಳು ಸೇರಿ ಒಟ್ಟು 237 ಜನರು ಈ ಫ್ಲೈಟ್ನಲ್ಲಿ ಬೆಂಗಳೂರಿಗೆ ಆಗಮಿಸಿದ್ದಾರೆ.
226 ಪ್ರಯಾಣಿಕರನ್ನು ಏರ್ಪೋರ್ಟ್ನಲ್ಲಿಯೇ ಆರ್ಟಿಪಿಸಿಆರ್ ಟೆಸ್ಟ್ಗೆ ಒಳಪಡಿಸಲಾಗಿದೆ. ಇದರಲ್ಲಿ 5 ಜನರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಕೊರೊನಾ ಪಾಸಿಟಿವ್ ಬಂದವರನ್ನು ಆ್ಯಂಬುಲೆನ್ಸ್ ಮೂಲಕ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ. ಇನ್ನುಳಿದ 221 ಪ್ರಯಾಣಿಕರ ವರದಿ ನೆಗೆಟಿವ್ ಬಂದಿದ್ದು, ಹೋಮ್ ಐಸೋಲೇಷನ್ಗೆ ಒಳಗಾಗುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:ವ್ಯಾಕ್ಸಿನ್ ಖರೀದಿ ಒಪ್ಪಂದಕ್ಕೆ ಕೇಂದ್ರದಿಂದ ಸಹಿ: ಕೊವಿಶೀಲ್ಡ್ ಪ್ರತಿ ಡೋಸ್ಗೆ 200 ರೂ. ನಿಗದಿ