ಬೆಂಗಳೂರು: 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮದ ಎಲ್ಲ ಶಾಲೆಗಳಲ್ಲಿ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮಾ.27 ರಿಂದ ಏ.1 ರ ವರೆಗೆ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಾಜ್ಯ ಶಾಲಾ ಗುಣಮಟ್ಟ ಮೌಲ್ಯಾಂಕನ ಮತ್ತು ಅಂಗೀಕರಣ ಪರಿಷತ್ ತಿಳಿಸಿದೆ. 2022-23ನೇ ಸಾಲಿನಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುತ್ತಿರುವ ಎಲ್ಲ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಈ ವಿದ್ಯಾರ್ಥಿಗಳಿಗೆ ಮಾ.13 ರಿಂದ ನಿಗದಿಪಡಿಸಿದ್ದ ಮೌಲ್ಯಾಂಕನವನ್ನು ಹೈಕೋರ್ಟ್ ಆದೇಶದಂತೆ ಮುಂದೂಡಲಾಗಿತ್ತು. ಪ್ರಸ್ತುತ ನ್ಯಾಯಾಲಯ ಮೌಲ್ಯಾಂಕನ ನಡೆಸಲು ಅವಕಾಶ ಕಲ್ಪಿಸಿದೆ.
ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಆಯಾ ಶಾಲೆಗಳನ್ನು ಮೌಲ್ಯಾಂಕನ ಕೇಂದ್ರಗಳಾಗಿ ಪರಿಗಣಿಸಿದೆ. ಈ ಮೌಲ್ಯಾಂಕನವು ವಿದ್ಯಾರ್ಥಿಗಳ ಕಲಿಕಾ ಮಟ್ಟ, ನ್ಯೂನತೆ ಹಾಗೂ ಯಾವ ವಿಷಯದ ಹಿನ್ನಡೆ ಉಂಟಾಗಿದೆ ಎಂಬುದನ್ನು ತಿಳಿಯುವ ಉದ್ದೇಶ ಹೊಂದಿದೆ. ಮೌಲ್ಯಾಂಕನದಲ್ಲಿ ಯಾವುದೇ ಅನುತ್ತೀರ್ಣವಿಲ್ಲ ಎಂದು ಪರಿಷತ್ ತಿಳಿಸಿದೆ.
ಸಹಾಯವಾಣಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯವಾಣಿ ಕಾರ್ಯಕ್ರಮ ಆಯೋಜಿಸಿದೆ. ಈ ಸಹಾಯವಾಣಿಯು ಮಾ.20ರಂದ ಮಧ್ಯಾಹ್ನ 3 ಗಂಟೆಯಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ, 6ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂಗಳೂರು-560003 ಇಲ್ಲಿ ಸೇವಾನಿರತವಾಗಲಿದೆ.
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಜೀವನದಲ್ಲಿ ನಿರ್ಣಾಯಕ ಹಂತದ ಪರೀಕ್ಷೆಯಾಗಿದೆ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಮಕ್ಕಳು ಗಳಿಸಬೇಕೆಂದು ಪೋಷಕರ ಅಭಿಲಾಷೆ. ವಿದ್ಯಾರ್ಥಿಗಳ ಸಾಮರ್ಥ್ಯ, ಬುದ್ಧಿಶಕ್ತಿ, ಆಸಕ್ತಿ, ಕ್ರಿಯಾಶೀಲತೆ ಹಾಗು ಕಠಿಣ ಪರಿಶ್ರಮವನ್ನು ಗಣನೆಗೆ ತೆಗೆದುಕೊಳ್ಳದೇ ಹೆಚ್ಚು ಅಂಕಗಳನ್ನು ಗಳಿಸಿ ಎಂದು ಅವರ ಮೇಲೆ ಒತ್ತಡವನ್ನು ಪೋಷಕರು, ಶಿಕ್ಷಕರು ಹಾಕುತ್ತಿರುವುದು ಇತ್ತೀಚಿನ ಸಮಸ್ಯೆ.
ಇದರಿಂದ ವಿದ್ಯಾರ್ಥಿಗಳು ಅಧ್ಯಯನದ ಕಡೆ ಗಮನಹರಿಸಲು ಸಾಧ್ಯವಾಗದೇ ಇರುವುದು, ಏಕಾಗ್ರತೆ ಕಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ಈ ಸಮಸ್ಯೆ ನಿವಾರಣೆಯಾಗದೇ ವಿದ್ಯಾರ್ಥಿ ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸಾಧ್ಯವಾಗುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಬರೆಯಲು ಸ್ಪೂರ್ತಿ ನೀಡಬೇಕಾದ ಅವಶ್ಯಕತೆ ಇದೆ.
ಈ ರೀತಿ ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿ ಪರಿಹಾರ ಕಂಡುಹಿಡಿಯುವ ಹಾಗೂ ಭಯರಹಿತ ಪರೀಕ್ಷೆ ಬರೆಯಲು ಆತ್ಮಸ್ಥೈರ್ಯ ತುಂಬುವ ಸದುದ್ದೇಶದಿಂದ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಹಿಂದಿನ ವರ್ಷಗಳಂತೆ ಈ ವರ್ಷವೂ ಸಹಾಯವಾಣಿ ಕೌನ್ಸೆಲಿಂಗ್ ಅನ್ನು ಸೋಮವಾರ ಮಧ್ಯಾಹ್ನ ಪಾರಂಭಿಸಲಿದೆ. ಇದಕ್ಕಾಗಿ 080-23310075/76 ದೂರವಾಣಿ ಸಂಖ್ಯೆ ಮೀಸಲಿಡಲಾಗಿದೆ.
ಇದನ್ನೂಓದಿ:Watch.. ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲಿ ಮಾತನಾಡಿ ಗಮನ ಸೆಳೆದ ಡಿವೈನ್ ಸ್ಟಾರ್