ಬೆಂಗಳೂರು: ಕಪ್ಪು ಶಿಲೀಂದ್ರದ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರವು ಇಂದು ರಾಜ್ಯಕ್ಕೆ ಹೆಚ್ಚುವರಿಯಾಗಿ 5,190 ವಯಲ್ಸ್ ಎಂಫೊಟೆರಿಸಿನ್-ಬಿ ಚುಚ್ಚುಮದ್ದನ್ನು ಹಂಚಿಕೆ ಮಾಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದಗೌಡ ತಿಳಿಸಿದ್ದಾರೆ.
ನಿನ್ನೆಯ ತನಕ ಅಂದರೆ 26 ಮೇ 2021ರವರೆಗೆ 5180 ವಯಲ್ಸ್ ಎಂಫೊಟೆರಿಸಿನ್ - ಬಿ ಚುಚ್ಚುಮದ್ದನ್ನು ರಾಜ್ಯಕ್ಕೆ ಹಂಚಿಕೆ ಮಾಡಲಾಗಿತ್ತು. ಇಂದು ರಾಜ್ಯದ ಬೇಡಿಕೆಯನ್ನು ಪರಿಗಣಿಸಿ ಹೆಚ್ಚುವರಿಯಾಗಿ 5190 ವಯಲ್ಸ್ ನೀಡಲಾಗಿದೆ. ಇಲ್ಲಿಯ ತನಕ ರಾಜ್ಯಕ್ಕೆ ಒಟ್ಟು 10370 ವಯಲ್ಸ್ ಎಂಫೊಟೆರಿಸಿನ್-ಬಿ ಒದಗಿಸಿದಂತಾಯಿತು ಎಂದು ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಇದಲ್ಲದೆ, ರಾಜ್ಯಕ್ಕೆ ಇದುವರೆಗೆ ಕೊರೊನಾ ಚಿಕಿತ್ಸೆಗಾಗಿ ಒಟ್ಟು 14,25,000 ವಯಲ್ಸ್ ರೆಮ್ಡೆಸಿವಿರ್ ಹಂಚಿಕೆ ಮಾಡಲಾಗಿದೆ. ಹಾಗೆಯೇ ರಾಜ್ಯಕ್ಕೆ 13935 ವಯಲ್ಸ್ ಟೊಸಿಲಿಜುಮಾಬ್ ಚುಚ್ಚುಮದ್ದನ್ನು ಸಹ ವಿತರಿಸಲಾಗಿದೆ ಎಂದು ವಿವರಿಸಿದರು.
ಓದಿ: ಮೇಕೆದಾಟು ಯೋಜನೆ ವಿವಾದ: ಕಾನೂನು ಹೋರಾಟಕ್ಕೆ ಮುಂದಾದ ರಾಜ್ಯ ಸರ್ಕಾರ