ಬೆಂಗಳೂರು: ಮೇ 3ಕ್ಕೆ ಲಾಕ್ಡೌನ್ ಅಂತ್ಯವಾಗಲಿ ಎಂದು ಕೆಎಸ್ಆರ್ಟಿಸಿ ದೇವರಲ್ಲಿ ಮೊರೆ ಹೋಗುವುದು ಮಾತ್ರ ಬಾಕಿ ಇದೆ. ಅಪಾರ ಪ್ರಮಾಣದ ನಷ್ಟದಿಂದಾಗಿ ಚೇತರಿಸಿಕೊಳ್ಳುವುದು ಸವಾಲಾಗಿರುವ ಮಧ್ಯೆ ಕಾಡುತ್ತಿರುವ ಕೊರೊನಾ ಸಂಸ್ಥೆಯ ಆರ್ಥಿಕ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ.
ಮಾ. 24ಕ್ಕೆ ಲಾಕ್ಡೌನ್ ಘೋಷಣೆಯಾದ ದಿನದಿಂದ ಇಂದಿನವರೆಗೂ ಒಂದೇ ಒಂದು ಕೆಎಸ್ಆರ್ಟಿಸಿ ಬಸ್ ಓಡಿಲ್ಲ. ಅಲ್ಲೊಂದು ಇಲ್ಲೊಂದು ಬಿಎಂಟಿಸಿ ಬಸ್ ಕಾಣಸಿಗುತ್ತವೆ. ಅದೂ ನಷ್ಟದಲ್ಲಿಯೇ ಓಡಿಸುತ್ತಿದೆ. ಆದರೆ, ಕೆಎಸ್ಆರ್ಟಿಸಿ ಬಸ್ಗಳು ಎಲ್ಲಿಯೂ ಸಂಚರಿಸುತ್ತಿಲ್ಲ. ಘಟಕಗಳಲ್ಲಿ ನಿಂತಲ್ಲೇ ನಿಂತಿವೆ. ಬಸ್ಗಳು ನಿಂತಲ್ಲೇ ನಿಂತಿದ್ದರಿಂದ ಸಾರಿಗೆ ಸಂಸ್ಥೆಗೆ ಆಗುತ್ತಿರುವ ನಷ್ಟವೆಷ್ಟು ಅಂತ ಗಮನಿಸಿದರೆ ನಿಜಕ್ಕೂ ಆಘಾತ ಆಗುವುದು ನಿಜ.
ಏ. 14ರವರೆಗೆ ಲಾಕ್ಡೌನ್ ಮುಂದುವರಿದಾಗಲೇ 230 ಕೋಟಿಗೂ ಹೆಚ್ಚು ನಷ್ಟವಾಗುವ ಅಂದಾಜು ಮಾಡಲಾಗಿತ್ತು. ಆದರೆ, ಇದೀಗ ಅದು ಮೇ 3ಕ್ಕೆ ವಿಸ್ತರಣೆಯಾಗಿರುವ ಹಿನ್ನೆಲೆ ನಷ್ಟದ ಮೊತ್ತವೂ ಹೆಚ್ಚಾಗಿದೆ. ಸದ್ಯ ಕೆಎಸ್ಆರ್ಟಿಸಿಗೆ ಮೇ 3ರವರೆಗೆ ಲಾಕ್ಡೌನ್ ಆಗುವುದರಿಂದ ಎದುರಾಗುವ ನಷ್ಟದ ಮೊತ್ತ 450 ಕೋಟಿ ರೂ. ಆಗಲಿದೆ ಎಂದು ಅಂದಾಜಿಸಲಾಗುತ್ತಿದೆ.
ವಿಭಾಗವಾರು ಸಂಚಾರ
ಕೆಎಸ್ಆರ್ಟಿಸಿ ವತಿಯಿಂದ ಪ್ರತಿದಿನ ಪ್ರೀಮಿಯಂ ಹಾಗೂ ಪ್ರೀಮಿಯಂಯೇತರ ವಿಭಾಗವಾರು ಬಸ್ ಸಂಚಾರ ಆಗುತ್ತದೆ. ಪ್ರೀಮಿಯಂ ವಿಭಾಗದಲ್ಲಿ ಗಮನಿಸುವುದಾದರೆ ನಿತ್ಯ 790 ಬಸ್ ರಾಜ್ಯದ ವಿವಿಧ ಭಾಗಗಳಿಗೆ ಸಂಚರಿಸುತ್ತವೆ. ಪ್ರೀಮಿಯಂಯೇತರ ವಿಭಾಗದಲ್ಲಿ 7379 ಬಸ್ಗಳು ಓಡುತ್ತವೆ. ಅಲ್ಲಿಗೆ ಒಟ್ಟಾರೆ 8,169 ಬಸ್ಗಳು ಕೆಎಸ್ಆರ್ಟಿಸಿ ಅಡಿ ಸಂಚರಿಸುತ್ತವೆ. ಪ್ರತಿದಿನ ಪ್ರೀಮಿಯಂ ವಿಭಾಗದ ಬಸ್ಗಳು 3,79,368 ಕಿ.ಮೀ. ಸಂಚರಿಸುತ್ತವೆ. ಪ್ರೀಮಿಯಂಯೇತರ ಬಸ್ಗಳು 26,68,351 ಕಿ.ಮೀ. ಓಡುತ್ತವೆ. ಅಲ್ಲಿಗೆ ಒಟ್ಟು 30,47,719 ಕಿ.ಮೀ. ಸಂಚಾರ ಇರುತ್ತದೆ.
ನಿತ್ಯದ ನಷ್ಟದ ಮಾಹಿತಿ ಗಮನಿಸುವುದಾದರೆ ಪ್ರೀಮಿಯಂ ವಿಭಾಗದಲ್ಲಿ ಏ. 24ರವರೆಗೆ 68.50 ಕೋಟಿ ರೂ. ನಷ್ಟವಾದರೆ, ಪ್ರೀಮಿಯಂಯೇತರ ವಿಭಾಗದಲ್ಲಿ 287 ಕೋಟಿ ರೂ. ನಷ್ಟವಾಗಿದೆ. ಅಲ್ಲಿಗೆ ಒಟ್ಟು ನಷ್ಟ ಲೆಕ್ಕ ಹಾಕಿದರೆ 356 ಕೋಟಿ ರೂ. ಆಗಿದೆ. ಇದರ ಹೊರತು ಬಸ್ ನಿಲ್ದಾಣದ ನಿರ್ವಹಣೆ, ಘಟಕ, ಬಸ್ಗಳ ಮೇಲ್ವಿಚಾರಣೆ, ಅಧಿಕಾರಿಗಳ ಓಡಾಟ ಇತರೆ ವೆಚ್ಚಗಳು ಇನ್ನಷ್ಟು ಹೆಚ್ಚಿವೆ. ಸಂಸ್ಥೆ ಈಗಾಗಲೇ ಬಸ್ ಸಂಚಾರ ರದ್ಧತಿ, ಸಿಬ್ಬಂದಿ ವೇತನ, ಇತರೆ ನಷ್ಟ, ನಿಲ್ದಾಣ ನಿರ್ವಹಣೆ ಸೇರಿ ಒಟ್ಟು ನಿನ್ನೆಗೆ 375 ಕೋಟಿ ರೂ. ಮೊತ್ತದ ನಷ್ಟ ಅನುಭವಿಸಿದೆ. ಇಂದು ಮತ್ತೆ 9ರಿಂದ 11 ಕೋಟಿ ರೂ. ಸೇರ್ಪಡೆಯಾಗಲಿದೆ.
ಒಟ್ಟು ಮೇ 3ರವರೆಗೆ ಲಾಕ್ಡೌನ್ ಇದ್ದು, ನಂತರ ಅಂತ್ಯವಾದರೆ ಆ ಹೊತ್ತಿಗೆ ಸಂಸ್ಥೆಗೆ ಆಗುವ ನಷ್ಟ 450 ಕೋಟಿ ರೂಪಾಯಿವರೆಗೂ ತಲುಪುವ ನಿರೀಕ್ಷೆ ಇದೆ. ಒಟ್ಟಾರೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳು ನಿಂತಲ್ಲೇ ನಿಂತಿದ್ದು, ಲಾಕ್ಡೌನ್ ತೆರವಿನ ನಂತರ ಇನ್ನೆಷ್ಟು ಸಂಖ್ಯೆಯಲ್ಲಿ ಬ್ರೇಕ್ ಡೌನ್ ಆಗಲಿವೆ ಎನ್ನುವ ಅಂದಾಜಿಲ್ಲ. ಒಟ್ಟಾರೆ ಕೊrಒನಾ ಕೆಎಸ್ಆರ್ಟಿಸಿಗೆ 500 ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ನಷ್ಟವನ್ನು ಉಂಟುಮಾಡುವಲ್ಲಿ ಯಾವುದೇ ಸಂಶಯವಿಲ್ಲ ಎನ್ನಲಾಗುತ್ತಿದೆ.